ಬಳ್ಳಾರಿ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೇಶದ ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬರೂ ವಕ್ಫ್ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದ ಮತ್ತು ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದೆ. ಸಂವಿಧಾನದಲ್ಲಿ ಇಲ್ಲದ ವಿಶೇಷ ಸೌಲಭ್ಯ ಮತ್ತು ಸವಲತ್ತುಗಳನ್ನು, ಇಸ್ಲಾಂ ರಾಷ್ಟ್ರಗಳಲ್ಲಿ ಇಲ್ಲದ ಕಾಯ್ದೆಯ ಆಶ್ರಯವನ್ನು ಮುಸ್ಲಿಮರಿಗೆ ಭಾರತದಲ್ಲಿ ಒದಗಿಸಲಾಗಿದೆ. ಅದರಲ್ಲೂ, ಕಾಂಗ್ರೆಸ್ ಪಕ್ಷವು ಮುಸ್ಲಿಮರ ತುಷ್ಠೀಕರಣಕ್ಕಾಗಿ ಕರ್ನಾಟಕದ ಭೂಮಿಗಳನ್ನು ವಕ್ಫ್‍ಬೋರ್ಡ್ ಹೆಸರಿಗೆ ವರ್ಗಾವಣೆ ಮಾಡುವ ಹುನ್ನಾರ ನಡೆಸಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದರು.
ವಕ್ಫ ಕಾನೂನಿನ ನೆರವು ಪಡೆದು ಸಚಿವ ಜಮೀರ್ ಅಹಮ್ಮದ್ ಕರ್ನಾಟಕದಲ್ಲಿ `ಲ್ಯಾಂಡ್ ಜಿಹಾದ್' ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ಡಾ. ಮನಮೋಹನ್ ಸಿಂಗ್ ಅವರು ಈ ಕಾಯ್ದೆಗೆ ಹೆಚ್ಚು ಮಹತ್ವ ನೀಡಿದ್ದರು. ಪ್ರಸ್ತುತ ಈ ಕಾಯ್ದೆಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ಎನ್‍ಡಿಎ ಗೆಲುವು
ಸಂಡೂರು, ಶಿವಮೊಗ್ಗ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಗಳ ಗೆಲುವು ಖಚಿತ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ `ವಲ್ರ್ಡ್ ಕಪ್' ಪಡೆಯಲು ಅರ್ಹವಾಗಿದೆ.
ಸಿದ್ದರಾಮಯ್ಯ ಅವರು ಈಗ `ಮಿಸ್ಟರ್ ಕ್ಲೀನ್' ಅಲ್ಲ `ಮಿಸ್ಟರ್ ಕರಪ್ಟ್' ಆಗಿದ್ದಾರೆ ಎಂದು ಟೀಕಿಸಿದರು.
ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್, ಶಶಿಲ್ ಜಿ. ನಮೋಶಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು,
ಮುಖಂಡರುಗಳಾದ ಕೆ.ಎ. ರಾಮಲಿಂಗಪ್ಪ, ಎಸ್. ಗುರುಲಿಂಗನಗೌಡ, ಗುತ್ತಿಗನೂರು ವಿರೂಪಾಕ್ಷಗೌಡ, ಹೆಚ್. ಹನುಂಮತಪ್ಪ, ಗೋನಾಳ್ ಮುರಹರಗೌಡ, ಡಾ. ಬಿ.ಕೆ. ಸುಂದರ್, ಎಸ್. ಮಲ್ಲನಗೌಡ, ಸುಮಾರೆಡ್ಡಿ, ಗಾಳಿ ಶಂಕ್ರಪ್ಪ. ರಾಮಕೃಷ್ಣ, ಗಣಪಾಲ್ ಐನಾಥ ರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್