ಲೋಕಾಯುಕ್ತದಿಂದ ವಿವಾದಿತ 14 ನಿವೇಶನಗಳ ಸ್ಥಳ ಪರಿಶೀಲನೆ
ಮೈಸೂರು, 01 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ನೀಡುವುದಾಗಿ ಪತ್ರ ಬರೆದ ನಂತರವೂ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಇಂದು ಬೆಳಿಗ್ಗೆ ವಿವಾದಿತ ಜಮೀನಿನ ಸ್ಥಳ ಪರಿಶೀಲನೆ ನಡೆಸಿದ
lokayukta-police-conducted-site-inspection-


ಮೈಸೂರು, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ನೀಡುವುದಾಗಿ ಪತ್ರ ಬರೆದ ನಂತರವೂ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಇಂದು ಬೆಳಿಗ್ಗೆ ವಿವಾದಿತ ಜಮೀನಿನ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ದೂರುದಾರರಾದ ಸ್ನೇಹಮಯಿ ಕೃಷ್ಣ ಅವರೊಂದಿಗೆ ಮುಡಾ ಅಧಿಕಾರಿಗಳು, ಲೋಕಾಯುಕ್ತದ ಪೊಲೀಸರು ಕೆಸರೆ ಗ್ರಾಮಕ್ಕೆ ತೆರಳಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದರು ಎಂದು ಹೇಳಲಾದ ಭೂಮಿಯ ಪರಿಶೀಲನೆ ನಡೆಸಿದರು.

ಈ ವೇಳೆ ಪೊಡಿ, ನಕ್ಷೆ ಹಾಗೂ ಇತರ ದಾಖಲಾತಿಗಳೊಂದಿಗೆ ಸ್ಥಳದಲ್ಲಿ ಮಹಜರು ನಡೆಸಲಾಯಿತು. ಪಾರ್ವತಿ ಅವರದು ಎಂದು ಹೇಳಲಾದ ಜಾಗವನ್ನು ಮುಡಾ ಅಭಿವೃದ್ಧಿಪಡಿಸಿ ನಿವೇಶನಗಳನ್ನಾಗಿ ವಿಂಗಡಿಸುವುದು, ನಿವೇಶನ ಸಂಖ್ಯೆಗಳ ಫಲಕಗಳನ್ನು ನೆಟ್ಟಿರುವುದು, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳು ಪೂರ್ಣಗೊಂಡಿರುವುದು ಕಂಡು ಬಂದಿತು.

ಈ ಸ್ಥಳದಲ್ಲಿ ಸುತ್ತಮುತ್ತ ಹಲವು ಬೃಹತ್ ಕಟ್ಟಡಗಳು ನಿರ್ಮಾಣಗೊಂಡಿರುವುದು ಕಾಣಸಿಗುತ್ತಿದೆ.

ಮಲ್ಲಿಕಾರ್ಜುನ ಸ್ವಾಮಿಯವರು ದೇವರಾಜು ಅವರಿಂದ ಜಮೀನನ್ನು ಖರೀದಿಸಿದ್ದರು. ಅನಂತರ ತಮ್ಮ ಸಹೋದರಿ ಆಗಿರುವ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಅರಿಶಿನ ಕುಂಕುಮಕ್ಕೆ ಭೂಮಿಯನ್ನು ಉಡುಗೊರೆ ನೀಡಿದ್ದರು ಎಂದು ಹೇಳಲಾಗಿದೆ.

ಈ ಜಮೀನಿನ ಪರಭಾರೆಯೇ ಅಕ್ರಮ ಎಂಬುದು ಸ್ನೇಹಮಯಿ ಕೃಷ್ಣ ಅವರ ದೂರಾಗಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ತನಿಖೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು ಇಂದು ಪ್ರಥಮವಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ , ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ನೋಟಿಸ್ ಬಂದಿಲ್ಲ. ಆದರೆ, ವಿಚಾರಣೆಯಲ್ಲಿ ಯಾವುದೇ ದಾಖಲಾತಿ ಕೋರಿದ್ದರೆ ನಾನು ಕೊಡಲು ಸಿದ್ಧ ಎಂದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande