ಅಂತರಾಷ್ಟ್ರೀಯ ಕಾಫಿ ದಿನ, ಕಾಫಿ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳು
ಬ್ಲಾಕ್ ಕಾಫಿ ಸೇವನೆ ಮಾಡಿ ಖಿನ್ನತೆ, ಮಧುಮೇಹ ಬರದಂತೆ ನೋಡಿಕೊಳ್ಳಿ
ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?


ಬೆಂಗಳೂರು, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಾಫಿ ಕುಡಿಯುವುದು ಒಳ್ಳೆಯದಲ್ಲ ಎನ್ನುವುದು ಹಲವರ ಮನೋಭಾವ. ಆದರೆ ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಪಾನಿಯವೆಂದರೆ ಅದು ಕಾಫಿ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಹೋಗುತ್ತಾರೆ. ಕೆಲವರಿಗೆ ಕಾಫಿಯ ಪರಿಮಳ, ಅದರ ಸ್ವಾದ ಅಮೃತವಿದ್ದಂತೆ.

ಅದರಲ್ಲಿಯೂ ಬ್ಲಾಕ್ ಕಾಫಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ಕಾಫಿ ನಮ್ಮ ದೇಶಕ್ಕೆ ಬಂದದ್ದು ಹೇಗೆ? ಇದರ ಇತಿಹಾಸ, ಮಹತ್ವವೇನು? ಈ ದಿನವನ್ನು ಆಚರಿಸುವ ಉದ್ದೇಶವೇನು? ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ದಿನದ ಹಿನ್ನೆಲೆಯೇನು?

ಅಂತರಾಷ್ಟ್ರೀಯ ಕಾಫಿ ಸಂಸ್ಥೆಯ 77 ಸದಸ್ಯ ರಾಷ್ಟ್ರಗಳು ಮತ್ತು ಪ್ರಪಂಚದಾದ್ಯಂತದ ಕಾಫಿ ಸಂಘಗಳು ಅ. 1ರಂದು ಕಾಫಿ ದಿನವನ್ನು ಆಚರಿಸುತ್ತವೆ. 2014 ರಲ್ಲಿ, ಕಾಫಿ ವಲಯದ ವೈವಿಧ್ಯತೆ, ಗುಣಮಟ್ಟ ಮತ್ತು ಕಾಫಿ ಬೆಳೆಯುವವರ ಉತ್ಸಾಹವನ್ನು ಇಮ್ಮಡಿಗೊಳಿಸಲು ಮತ್ತು ಎಲ್ಲಾ ಕಾಫಿ ಪ್ರಿಯರಿಗೆ ಈ ದಿನವನ್ನು ಮೀಸಲಿಡಲು ಅಂತರಾಷ್ಟ್ರೀಯ ಕಾಫಿ ಸಂಸ್ಥೆ ನಿರ್ಧರಿಸಿದ್ದು, ಹಾಗಾಗಿ ನಾವು ಪ್ರತಿವರ್ಷ ಅ. 1ರಂದು ಅಂತರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತೇವೆ.

ಕಾಫಿಯನ್ನು ಭಾರತಕ್ಕೆ ತಂದವರು ಯಾರು?

ಭಾರತಕ್ಕೆ ಕಾಫಿಯನ್ನು ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಖ್ಯಾತಿಯ ಬಾಬಾಬುಡನ್ ಅವರು ತಂದರು. ಇವರು ಮೆಕ್ಕಾಯಾತ್ರೆಗೆಂದು ಹೋದಾಗ ಯೆಮೆನ್‌ನಿಂದ ತಮ್ಮೊಂದಿಗೆ ಏಳು ಕಾಫಿ ಬೀಜಗಳನ್ನು ಚಿಕ್ಕಮಗಳೂರಿಗೆ ತಂದರು. ಅಲ್ಲಿಂದ ಆ ಏಳು ಬೀಜಗಳಿಂದ ಚಿಕ್ಕಮಗಳೂರು ಕಾಫಿ ಬೆಳೆಗೆಂದೇ ಖ್ಯಾತಿ ಪಡೆಯುವಂತಾಗಿದೆ. ಭಾರತ ಪ್ರತಿವರ್ಷ ಸುಮಾರು 3,20,000 ಮೆಗಾಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ಪ್ರಮುಖ ಕಾಫಿ ಉತ್ಪಾದನಾ ರಾಜ್ಯಗಳಾಗಿವೆ. ಹಾಗೆ ಬೆಳೆದದ್ದರಲ್ಲಿ ಸುಮಾರು 70% ಕಾಫಿಯನ್ನು ಭಾರತ ರಫ್ತು ಮಾಡುತ್ತದೆ.

ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

1. ದೇಹಕ್ಕೆ ಶಕ್ತಿಯನ್ನು ನೀಡುತ್ತದೆ

ಕಾಫಿಯಲ್ಲಿ ಕೆಫೀನ್ ಅಂಶವು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

2. ಟೈಪ್ 2 ಮಧುಮೇಹವನ್ನು ಕಡಿಮೆ ಮಾಡುತ್ತದೆ

ನಿಯಮಿತವಾಗಿ ಕಾಫಿ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಒಂದು ವೇಳೆ ಮಧುಮೇಹ ಇದ್ದರೂ ಕೂಡ ಕಾಫಿಯಲ್ಲಿ ಸಿಗುವ ಕೆಫಿನ್ ಅಂಶ ತನ್ನ ಆಂಟಿಆಕ್ಸಿಡೆಂಟ್ ಹಾಗೂ ಮೆಗ್ನೀಷಿಯಂ ಅಂಶದ ಪ್ರಭಾವದಿಂದ ಮಧುಮೇಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಯಂತ್ರಿತ ಪ್ರಮಾಣದಲ್ಲಿ ಕಾಫಿ ಸೇವನೆ ಒಳ್ಳೆಯದು.

3. ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಅಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಕೆಲವು ನ್ಯೂರೋಡಿಜೆನರೇಟಿವ್ ಅಸ್ವಸ್ಥತೆಗಳಿಂದ ರಕ್ಷಿಸಲು ಕಾಫಿ ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ಅದಲ್ಲದೆ ನಿಯಮಿತವಾಗಿ ಕಾಫಿ ಸೇವನೆಯು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.

4. ತೂಕ ಕಡಿಮೆ ಮಾಡುತ್ತದೆ

ಕಾಫಿಯಲ್ಲಿ ಕಂಡು ಬರುವ ಕೆಫಿನ್ ಅಂಶವು ದೇಹದ ತೂಕ ಮತ್ತು ಬೊಜ್ಜಿನ ಸಮಸ್ಯೆ ಇರುವವರಿಗೆ ಒಳ್ಳೆಯದು. ಏಕೆಂದರೆ ಇದು ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕೊಬ್ಬಿನ ಅಂಶವನ್ನು ಕರಗಿಸುವಂತೆ ಸೂಚನೆ ಕೊಡುತ್ತದೆ. ಅನೇಕ ಆರೋಗ್ಯಕರ ಪಾನೀಯಗಳಲ್ಲಿ ಕೂಡ ಕೆಫಿನ್ ಅಂಶ ಇರುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande