
ವಿಜಯಪುರ, 09 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಹೊರ್ತಿ ಗ್ರಾಮದ ಕೆರೆಯ ತಡೆಗೋಡೆ ಕುಸಿತಗೊಂಡು ಸಾರ್ವಜನಿಕರು ಹಾಗೂ ರೈತರು ಆತಂಕಕ್ಕೊಳಗಾಗಿದ್ದ ಸಂದರ್ಭದಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೆರೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಲಾಗಿತ್ತು ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ತಿಳಿಸಿದ್ದಾರೆ.
ಹೊರ್ತಿ ಗ್ರಾಮದ ಕೆರೆಯ ತಡೆಗೋಡೆ ಕುಸಿತಗೊಂಡ ಹಿನ್ನೆಲೆಯಲ್ಲಿ ಕೆರೆಯ ಸುರಕ್ಷತೆ, ನೀರಿನ ಸಂರಕ್ಷಣೆ ಹಾಗೂ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಮಾರು ₹3.65 ಕೋಟಿ ವೆಚ್ಚದಲ್ಲಿ ಕೆರೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಕಾಮಗಾರಿ ಆರಂಭವಾದ ನಂತರ ಅದನ್ನು ವಿಳಂಬವಿಲ್ಲದೆ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕಾಮಗಾರಿ ಆರಂಭಗೊಂಡ ಕೆಲವೇ ತಿಂಗಳೊಳಗೆ ಕೆರೆಯ ಇಡೀ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲಾಗಿದೆ. ಇದರಿಂದ ಹಲವು ವರ್ಷಗಳಿಂದ ಎದುರಾಗಿದ್ದ ತಡೆಗೋಡೆ ಕುಸಿತದ ಅಪಾಯಕ್ಕೆ ಪರಿಹಾರ ದೊರೆತಿದ್ದು, ಕೆರೆಯ ಸುರಕ್ಷತೆಯೂ ಮತ್ತಷ್ಟು ಬಲಗೊಂಡಿದೆ.
ಸದ್ಯ ಹೊರ್ತಿ ಗ್ರಾಮದ ಕೆರೆಯಲ್ಲಿ ಸುಸಜ್ಜಿತ ಹಾಗೂ ಬಲಿಷ್ಠ ತಡೆಗೋಡೆ ನಿರ್ಮಾಣಗೊಂಡು ತಲೆಎತ್ತಿ ನಿಂತಿದೆ. ಇದರಿಂದ ಕೆರೆಯ ನೀರಿನ ಸಂಗ್ರಹಣೆ ಮತ್ತು ಸಂರಕ್ಷಣೆಗೆ ಅನುಕೂಲವಾಗುವುದರ ಜೊತೆಗೆ, ಕೆರೆಯ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯವೂ ಹೆಚ್ಚಾಗಿದೆ. ಮಳೆಗಾಲದಲ್ಲಿ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದರೂ ತಡೆಗೋಡೆಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಮಹತ್ವದ್ದಾಗಿದೆ ಎಂದು ಶಾಸಕ ಪಾಟೀಲ್ ತಿಳಿಸಿದ್ದಾರೆ.
ರೈತರ ಹಾಗೂ ಗ್ರಾಮಸ್ಥರ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡುವುದು ನಮ್ಮ ಅಭಿವೃದ್ಧಿಯ ಪ್ರಮುಖ ಗುರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ನೀರಾವರಿ ಮೂಲಸೌಕರ್ಯಗಳನ್ನು ಬಲಪಡಿಸುವುದು, ಕೆರೆ-ಕಟ್ಟೆಗಳ ಸಂರಕ್ಷಣೆ ಮಾಡುವುದು ಹಾಗೂ ರೈತರಿಗೆ ಅನುಕೂಲವಾಗುವಂತಹ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹೊರ್ತಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುವುದು ಗ್ರಾಮಸ್ಥರು ಹಾಗೂ ರೈತರಿಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿಯೂ ಇಂಡಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿ, ರೈತರು ಮತ್ತು ಸಾರ್ವಜನಿಕರ ಹಿತ ಕಾಯುವ ಅಭಿವೃದ್ಧಿಯ ಪಯಣ ಇದೇ ರೀತಿ ಮುಂದುವರಿಯಲಿದೆ ಎಂದು ಯಶವಂತರಾಯಗೌಡ ಪಾಟೀಲ್ ಭರವಸೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande