
ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.):
ಆ್ಯಂಕರ್:
ಅವಧಿ ಮುಗಿದ ಆಹಾರ ಪದಾರ್ಥಗಳು ಹಾಗೂ ಔಷಧಿಗಳನ್ನು ಮರುಲೇಬಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ಒಂದು ವಾರದಲ್ಲಿ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಸುಮಾರು ₹3 ಕೋಟಿಗೂ ಅಧಿಕ ಮೌಲ್ಯದ ಫುಡ್ ಹಾಗೂ ಡ್ರಗ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಆಧರಿಸಿ ವಿವಿಧೆಡೆ ಪರಿಶೀಲನೆ ನಡೆಸಿದಾಗ ಡಾರ್ಕ್ ಸ್ಟೋರ್ಗಳಲ್ಲಿ ಅವಧಿ ಮುಗಿದ ಆಹಾರ ಪದಾರ್ಥಗಳು ಹಾಗೂ ಔಷಧಿಗಳು ಪತ್ತೆಯಾಗಿವೆ. ಆನೇಕಲ್ ಮತ್ತು ದೇವನಹಳ್ಳಿಯಲ್ಲಿಯೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು.
ಅವಧ ಮುಗಿದ ಔಷಧಿಗಳ ಮೇಲಿನ ದಿನಾಂಕ ಹಾಗೂ ಲೇಬಲ್ಗಳನ್ನು ಬದಲಾಯಿಸಿ ಮರುಮಾರಾಟ ಮಾಡಲಾಗುತ್ತಿತ್ತು. ಲಿಂಗರಾಜಪುರದಲ್ಲಿರುವ ಲಿಯೋ ಸಂಸ್ಥೆಯಲ್ಲಿ ಸುಮಾರು ₹45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಸಿದಾಗ ಹಲವು ಕಡೆಗಳಲ್ಲಿ ₹1 ಕೋಟಿಗೂ ಅಧಿಕ ಮೌಲ್ಯದ ಅವಧಿ ಮುಗಿದ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದು, ಸಂಬಂಧಪಟ್ಟ ವೇರ್ಹೌಸ್ಗಳನ್ನು ಸೀಜ್ ಮಾಡಿ ಮುಚ್ಚಲಾಗಿದೆ ಎಂದು ತಿಳಿಸಿದರು.ಸಾಮಾಜಿಕ ಕಳಕಳಿ ಇಲ್ಲದೆ ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಇಂತಹ ಕಂಪನಿಗಳ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ತರಬೇಕಾಗಿದೆ. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಲಹೆ ಪಡೆಯುತ್ತೇವೆ ಎಂದು ಖಾದರ್ ಹೇಳಿದರು.
ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರೂ ಸಹ ಔಷಧಿ ಹಾಗೂ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಅವುಗಳ ಅವಧಿ, ಲೇಬಲ್ ಮತ್ತು ಇತರ ಮಾಹಿತಿಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಆರೋಗ್ಯ ಇಲಾಖೆಯಿಂದ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಅಂಗಡಿಗಳ ಮುಂದೆ ಈ ಕ್ಯೂಆರ್ ಕೋಡ್ಗಳನ್ನು ಅಂಟಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಇ-ಕಾಮರ್ಸ್ ಸಂಸ್ಥೆಗಳಿಗೂ ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ. ಆನ್ಲೈನ್ ಮೂಲಕ ಮಾರಾಟವಾಗುವ ಆಹಾರ ಮತ್ತು ಔಷಧಿಗಳ ಗುಣಮಟ್ಟ ಹಾಗೂ ಅವಧಿಯ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R