ರೈತರ ವಿಮೆ ಹಣ ಕಟ್ಟದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಸೂಚನೆ
ಬೆಂಗಳೂರು, 08 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ರೈತರು ಬೆಳೆ ವಿಮೆಗೆ ಪಾವತಿಸಿದ್ದ ಹಣವನ್ನು ಡಿಸಿಸಿ ಬ್ಯಾಂಕ್‌ಗೆ ಪಾವತಿಸದ ಕಾರಣ 93 ರೈತರ ವಿಮೆ ತಿರಸ್ಕೃತಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಸ್ವಸಹಾಯ ಸೊಸೈಟಿ ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವ
ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಭೇಟಿ


ಬೆಂಗಳೂರು, 08 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ರೈತರು ಬೆಳೆ ವಿಮೆಗೆ ಪಾವತಿಸಿದ್ದ ಹಣವನ್ನು ಡಿಸಿಸಿ ಬ್ಯಾಂಕ್‌ಗೆ ಪಾವತಿಸದ ಕಾರಣ 93 ರೈತರ ವಿಮೆ ತಿರಸ್ಕೃತಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಸ್ವಸಹಾಯ ಸೊಸೈಟಿ ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಬೆಳಗ್ಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಹಾಗೂ ತೆಂಗು ಬೆಳೆಗಾರರು, ವರ್ತಕರು ಮತ್ತು ಮಂಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

93 ರೈತರ ವಿಮೆ ತಿರಸ್ಕಾರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಟ್ಟನಹಳ್ಳಿ ಗ್ರಾಮದ ರೈತರೊಬ್ಬರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಬೆಳೆ ವಿಮೆಗಾಗಿ ಸ್ವಸಹಾಯ ಸೊಸೈಟಿಗೆ ಹಣ ಪಾವತಿಸಿದ್ದರೂ ಸೊಸೈಟಿಯವರು ಆ ಹಣವನ್ನು ಡಿಸಿಸಿ ಬ್ಯಾಂಕ್‌ಗೆ ಪಾವತಿಸದ ಕಾರಣ ವಿಮೆ ತಿರಸ್ಕೃತಗೊಂಡಿರುವುದಾಗಿ ಅಳಲು ತೋಡಿಕೊಂಡರು. ರೈತರಿಗೆ ಈ ಕುರಿತು ಸಂದೇಶವೂ ಬಂದಿರುವುದಾಗಿ ತಿಳಿಸಿದರು.

ರೈತರು ಹಣ ಪಾವತಿಸಿರುವ ಪಟ್ಟಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿರುವ ಸೊಸೈಟಿ ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈರುಳ್ಳಿ ತೂಕವನ್ನು ಖುದ್ದು ಪರಿಶೀಲಿಸಿದ ಸಿಎಂ

ಮಾರುಕಟ್ಟೆಯಲ್ಲಿ ರೈತರೊಂದಿಗೆ ಮಾತನಾಡಿದ ಶಿವಕುಮಾರ್, ಈರುಳ್ಳಿ ತರಲು ಪೊಲೀಸರು ತೊಂದರೆ ನೀಡುತ್ತಾರೆಯೇ, ರೈತರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸಲಾಗುತ್ತಿದೆಯೇ, ಮಂಡಿ ಮಾಲೀಕರು ಕಮಿಷನ್ ಪಡೆಯುತ್ತಾರೆಯೇ, ಪ್ರತಿ ಎಕರೆಗೆ ಎಷ್ಟು ವೆಚ್ಚವಾಗುತ್ತದೆ ಹಾಗೂ ಬೆಳೆಯ ತೂಕವನ್ನು ಸರಿಯಾಗಿ ಮಾಡಲಾಗುತ್ತಿದೆಯೇ ಎಂಬುದರ ಕುರಿತು ಮಾಹಿತಿ ಪಡೆದರು.

ಈ ವೇಳೆ ಮುಖ್ಯಮಂತ್ರಿ ಸ್ವತಃ ಈರುಳ್ಳಿ ಚೀಲಗಳ ತೂಕವನ್ನು ಪರಿಶೀಲಿಸಿದರು.

ಕಲಬುರಗಿ, ಬೀದರ್ ಹಾಗೂ ವಿಜಯಪುರ ಮಾರುಕಟ್ಟೆಗಳಲ್ಲಿ 8ರಿಂದ 10 ರೂ.ವರೆಗೆ ಕಮಿಷನ್ ಪಡೆಯಲಾಗುತ್ತದೆ. ಆದರೆ ಯಶವಂತಪುರ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಪಡೆಯುವುದಿಲ್ಲ. ಹೀಗಾಗಿ ಇಲ್ಲಿಗೆ ಬೆಳೆಯನ್ನು ತಂದು ಮಾರಾಟ ಮಾಡುತ್ತೇವೆ ಎಂದು ರೈತರು ಮುಖ್ಯಮಂತ್ರಿಗೆ ತಿಳಿಸಿದರು.

ಈ ಬಾರಿ ಮಳೆ ಕೊರತೆಯಿಂದ ಈರುಳ್ಳಿ ಇಳುವರಿ ಗಣನೀಯವಾಗಿ ಕುಸಿದಿದೆ ಎಂದು ರೈತರು ಹೇಳಿದರು. ಸಾಮಾನ್ಯವಾಗಿ ಎಕರೆಗೆ 150ರಿಂದ 200 ಪ್ಯಾಕೆಟ್ ಈರುಳ್ಳಿ ದೊರೆಯುತ್ತಿದ್ದು, ಈ ಬಾರಿ ಕೇವಲ 50 ಪ್ಯಾಕೆಟ್‌ಗಳಷ್ಟು ಇಳುವರಿ ಬಂದಿದೆ ಎಂದು ತಿಳಿಸಿದರು. ಮಳೆ ಹೆಚ್ಚಾದರೆ ಈರುಳ್ಳಿ ಜಮೀನಿನಲ್ಲೇ ಕೊಳೆಯುವ ಸಾಧ್ಯತೆಯಿದ್ದು, ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಸಿಗದ ಪರಿಸ್ಥಿತಿ ಎದುರಾಗುತ್ತದೆ ಎಂದು ಅಳಲು ತೋಡಿಕೊಂಡರು.

ಬೆಳೆ ವಿಮೆ ಸಿಗದ ಬಗ್ಗೆ ರೈತರ ಅಳಲು

ಬೆಳೆ ವಿಮೆ ಮಾಡಿಸಿದ್ದೀರಾ ಎಂದು ಮುಖ್ಯಮಂತ್ರಿ ಪ್ರಶ್ನಿಸಿದಾಗ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೈತರೊಬ್ಬರು ಪ್ರತಿ ಹೆಕ್ಟೇರ್‌ಗೆ 6,500 ರೂ. ವಿಮೆ ಪಾವತಿಸಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಸಿಎಂ ಭೇಟಿ ಬಗ್ಗೆ ರೈತರ ಮೆಚ್ಚುಗೆ

ಮುಖ್ಯಮಂತ್ರಿಯ ದಿಢೀರ್ ಭೇಟಿ ಕುರಿತು ರೈತರು ಸಂತಸ ವ್ಯಕ್ತಪಡಿಸಿದರು. ಕಳೆದ 30 ವರ್ಷಗಳಲ್ಲಿ ಯಾವುದೇ ಸಚಿವರು ಅಥವಾ ಮುಖ್ಯಮಂತ್ರಿಗಳು ಮಾರುಕಟ್ಟೆಗೆ ಬಂದು ರೈತರ ಸಮಸ್ಯೆಗಳನ್ನು ವಿಚಾರಿಸಿರಲಿಲ್ಲ. ತಾವು ಖುದ್ದಾಗಿ ಮಾರುಕಟ್ಟೆಗೆ ಬಂದು ಪರಿಸ್ಥಿತಿ ಪರಿಶೀಲಿಸುತ್ತಿರುವುದು ಸಂತಸ ತಂದಿದೆ ಎಂದು ರೈತರು ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಹೆಚ್ಚುವರಿ ಹಣ ಪಡೆದರೆ ಕ್ರಮ

ಮಂಡಿ ವರ್ತಕರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಎಪಿಎಂಸಿಗೆ ಎಷ್ಟು ಹಣ ಪಾವತಿಸುತ್ತೀರಿ ಎಂದು ಪ್ರಶ್ನಿಸಿದರು. ಕೆಲವರು 100 ರೂ.ಗೆ 60 ಪೈಸೆ ಹಾಗೂ ಮತ್ತೊಬ್ಬರು 1 ರೂ. ಪಾವತಿಸುತ್ತಿರುವುದಾಗಿ ತಿಳಿಸಿದರು.

ರೈತರಿಂದ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡುವ ಬಗ್ಗೆ ದೂರುಗಳು ಬಂದರೆ ಮಾಹಿತಿ ನೀಡುವಂತೆ ಸೂಚಿಸಿದ ಮುಖ್ಯಮಂತ್ರಿ, ಹೆಚ್ಚುವರಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ರೈತರಿಂದ ನೇರ ಖರೀದಿಯಲ್ಲಿ ತೂಕ ಮೋಸಕ್ಕೆ ಕಡಿವಾಣ

ಕೆಲವರು ಎಪಿಎಂಸಿ ಮಾರುಕಟ್ಟೆಗೆ ಬರದೆ ನೇರವಾಗಿ ರೈತರಿಂದಲೇ ಬೆಳೆ ಖರೀದಿಸುತ್ತಾರೆ. ಒಂದು ಬೆಲೆ ನಿಗದಿಪಡಿಸಿ, ನಂತರ ತೂಕದಲ್ಲಿ ವ್ಯತ್ಯಾಸ ಮಾಡಿ ರೈತರಿಗೆ ನಷ್ಟ ಉಂಟುಮಾಡುತ್ತಾರೆ ಎಂದು ರೈತರು ಮುಖ್ಯಮಂತ್ರಿಗೆ ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಶಿವಕುಮಾರ್, ರೈತರಿಂದ ನೇರವಾಗಿ ಬೆಳೆ ಖರೀದಿಸುವ ಸಂದರ್ಭದಲ್ಲಿ ತೂಕದಲ್ಲಿ ಯಾವುದೇ ಮೋಸವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೂಡ್ಲಿಗಿ ರೈತನ ಮನೆಗೆ ವಿದ್ಯುತ್ ಸಂಪರ್ಕದ ಭರವಸೆ

ಕೂಡ್ಲಿಗಿಯ ಹೊಸಹಟ್ಟಿ ಗ್ರಾಮದ ಈರುಳ್ಳಿ ಬೆಳೆಗಾರ ಆಂಜನಪ್ಪ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ತೋಟದಲ್ಲಿ ನೀರಿನ ವ್ಯವಸ್ಥೆ ಹೇಗಿದೆ ಎಂದು ವಿಚಾರಿಸಿದರು.

ತೋಟದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದರೂ ಸಂಪರ್ಕ ದೊರೆತಿಲ್ಲ. ತಮ್ಮ ಮನೆ ಮಾತ್ರವಲ್ಲದೆ, ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ಹತ್ತಾರು ಮನೆಗಳಿವೆ ಎಂದು ಆಂಜನಪ್ಪ ತಿಳಿಸಿದರು.

ಈ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ನಾನು ಪ್ರಜಾಸೇವೆ ಕಾರ್ಯಕ್ರಮ ಮಾಡಿದಾಗ ಬಂದು ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂದು ಅರ್ಜಿ ನೀಡಬೇಕಾಗಿಲ್ಲವೇ? ಯೋಚನೆ ಮಾಡಬೇಡಿ. ಎಲ್ಲರಿಗೂ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ವಿಚಾರಣೆ

ರೈತರೊಂದಿಗೆ ಮಾತುಕತೆ ವೇಳೆ, ನಿಮ್ಮ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಗೂ 10 ಕೆ.ಜಿ. ಅಕ್ಕಿ ಸಿಗುತ್ತಿದೆಯೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಇದಕ್ಕೆ ರೈತರು ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯುತ್ತಿದ್ದು, ಇದರಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande