
ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಸೆಪ್ಟಂಬರ್ 1 ರಿಂದ ಬಿಜೆಪಿ ನಡೆಸುತ್ತಿರುವ `ಲಿಂಗಸೂಗೂರು - ಬಳ್ಳಾರಿ' ಪಾದಯಾತ್ರೆಯ ಸೆಪ್ಟಂಬರ್ 10ರ ಸಮಾರೋಪ ಸಮಾರಂಭವನ್ನು ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ಆಯೋಜಿಸಲು ಜಿಲ್ಲಾಡಳಿತವು ನಿರಾಕರಿಸಿದೆ. ಬಿಜೆಪಿಯು ಜಿಲ್ಲಾಡಳಿತ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ `ರಣಕಹಳೆ' ಊದಲು ಸಿದ್ದತೆಯನ್ನು ನಡೆಸಿದೆ.
ಬಳ್ಳಾರಿಯಲ್ಲಿ ಅನೇಕ ದಶಕಗಳಿಂದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಜಕೀಯ, ಸರ್ಕಾರ ಮತ್ತು ರಾಜಕೀಯೇತರ ಸಮಾವೇಶಗಳು ನಡೆಯುತ್ತಲೇ ಇವೆ. ಇಂದಿರಾಗಾಂಧಿ, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೀಗೇ ಅನೇಕ ರಾಜಕಾರಣಿಗಳ ಚುನಾವಣಾ ಮತ್ತು ಇನ್ನಿತರೆ ಸಮಾವೇಶಗಳು ಮುನಿಸಿಪಲ್ ಹೈ ಸ್ಕೂಲ್ ಮೈದಾನದಲ್ಲಿ ನಡೆಯುವುದು ಸಹಜ.
ಆದರೆ, ಸೆಪ್ಟಂಬರ್ 1 ರಿಂದ ಬಿಜೆಪಿ ನಡೆಸುತ್ತಿರುವ `ಲಿಂಗಸೂಗೂರು - ಬಳ್ಳಾರಿ' ಪಾದಯಾತ್ರೆಯ ಸೆಪ್ಟಂಬರ್ 10ರ ಸಮಾರೋಪ ಸಮಾರಂಭವನ್ನು ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ಆಯೋಜಿಸಲು ಜಿಲ್ಲಾಡಳಿತವು ನಿರಾಕರಿಸಿದ್ದು, ಮೆಡಿಕಲ್ ಕಾಲೇಜಿನ ಮೈದಾನದಲ್ಲಿ ಸಮಾವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ಬಳ್ಳಾರಿ ಜಿಲ್ಲಾ ಬಿಜೆಪಿ `ಲಿಂಗಸೂಗೂರು - ಬಳ್ಳಾರಿ' ಪಾದಯಾತ್ರೆಯ ಸೆಪ್ಟಂಬರ್ 10ರ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಕರ್ನಾಟಕದ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಸೇರಿ ಒಟ್ಟು 40 ರಿಂದ 50 ಸಾವಿರ ಸಂಖ್ಯೆಯಲ್ಲಿ ಜನರನ್ನು ಸಭೆ ಸೇರಿಸುವ ಗುರಿಯನ್ನು ಹೊಂದಿದ್ದು, ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿಯೇ ಸಮಾರೋಪ ಸಮಾರಂಭ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದೆ.
ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಡಿಡಿಪಿಯು ಕಚೇರಿಯ ಕದವನ್ನು ತಟ್ಟಿರುವ ಜಿಲ್ಲಾ ಬಿಜೆಪಿಯು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನಾ ಸಮಾವೇಶವನ್ನು ನಡೆಸಲು 2017ರ ಸೆಪ್ಟಂಬರ್ 12 ರಂದು ಮತ್ತು ರಾಹುಲ್ ಗಾಂಧಿ ನೇತೃತ್ವದ `ಭಾರತ ಜೋಡೋ ಯಾತ್ರೆ'ಯ ಸಮಾವೇಶವನ್ನು ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಆದರೆ, ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಏತಕ್ಕಾಗಿ ಪರವಾನಿಗೆ ನೀಡುತ್ತಿಲ್ಲ? ಸ್ಪಷ್ಟ ಕಾರಣಗಳ ಉತ್ತರ ನೀಡಿರಿ ಎಂದು ಮನವಿ ಮಾಡಿದೆ.
ಆದರೆ, ಜಿಲ್ಲಾಡಳಿತವು ಯಾವುದೇ ರೀತಿಯಲ್ಲಿ ಸ್ಪಷ್ಟನೆ ನೀಡದೇ, ಬಳ್ಳಾರಿ ಮೆಡಿಕಲ್ ಕಾಲೇಜಿನ ಮೈದಾನದಲ್ಲಿ ಸಮಾವೇಶ ನಡೆಸಲು `ಪರವಾನಿಗೆ' ನೀಡುತ್ತೇವೆ ಎಂದು ಪುನರುಚ್ಚರಿಸುತ್ತಲೇ ಇದೆ.
ಆದರೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಮೋಕ ಅವರು, ಬಳ್ಳಾರಿ ಮೆಡಿಕಲ್ ಕಾಲೇಜು ಮೈದಾನದಲ್ಲಿ 3 ರಿಂದ 4 ಸಾವಿರ ಜನರು ಸಮಾವೇಶಗೊಳ್ಳಬಹುದು. ದಿನದಲ್ಲಿ 25ಕ್ಕೂ ಹೆಚ್ಚು ರೈಲು - ಗೂಡ್ಸ್ಗಳು ಸಂಚರಿಸುತ್ತಿರುವ ಕಾರಣ, ರೈಲ್ವೆ ಮೇಲ್ಸುತುವೆ ನಿರ್ಮಾಣ ಹಂತದಲ್ಲಿದೆ. ಅಲ್ಲದೇ, ಇರುವ ಒಂದೇ ಒಂದು ಚಿಕ್ಕದಾದ ರೈಲ್ವೆಗೇಟ್ನಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವ ಕಾರಣ ಮೆಡಿಕಲ್ ಕಾಲೇಜಿನ ಗ್ರೌಂಡ್ನಲ್ಲಿ ಸಮಾವೇಶವನ್ನು ನಡೆಸುವುದು ಸಾರ್ವಜನಿಕ ಹಿತದೃಷ್ಠಿಯಿಂದ ಸಲ್ಲದು. ಅಲ್ಲದೇ, ಆಸ್ಪತ್ರೆಗಳು - ಮೆಡಿಕಲ್ ಕಾಲೇಜು ಇದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾಡಳಿತವು ಕಾಂಗ್ರೆಸ್ನ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಬಿಜೆಪಿಯ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಅವಕಾಶ ನೀಡುತ್ತಿಲ್ಲ. ಅಧಿಕಾರಿಗಳು ಕಾಂಗ್ರೆಸ್ನ ಏಜೆಂಟರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರಣ ಬಿಜೆಪಿಯು ನಗರದ ಮಧ್ಯಭಾಗವಾಗಿರುವ ಗಡಿಗೆ ಚನ್ನಪ್ಪ ವೃತ್ತ (ರಾಯಲ್ ಸರ್ಕಲ್)ನಲ್ಲಿ ಸಮಾವೇಶ ನಡೆಸಲು ಪರವಾನಿಗೆ ನೀಡಲು ಮತ್ತೊಂದು ಮನವಿಯನ್ನು ಸಲ್ಲಿಸಿದೆ. ಆದರೆ, ಜಿಲ್ಲಾಡಳಿತವು ಬಿಜೆಪಿ ವಿರುದ್ಧವೇ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡತ್ತಿದೆ ಎಂದು ಅನಿಲ್ ನಾಯ್ಡು ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್