ರಾಜ್ಯದ ಎಲ್ಲ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಫೇರ್ ಮೀಟರ್ ಕಡ್ಡಾಯ
ಸಾರಿಗೆ ಇಲಾಖೆಯಿಂದ ಕಠಿಣ ಆದೇಶ
ರಾಜ್ಯದ ಎಲ್ಲ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಫೇರ್ ಮೀಟರ್ ಕಡ್ಡಾಯ


ಬೆಂಗಳೂರು, 07ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕ್ಯಾಬ್ ಅಗ್ರಿಗೇಟರ್‌ಗಳು ಹಾಗೂ ಟ್ಯಾಕ್ಸಿ ಮಾಲೀಕರು ಮನಸೋಇಚ್ಛೆ ದರ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಎಲ್ಲ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಫೇರ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೆಳಗಿನ ಜಾವ, ಜನದಟ್ಟಣೆಯ ಸಮಯ ಹಾಗೂ ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಅಗ್ರಿಗೇಟರ್ ಕಂಪನಿಗಳು ಮತ್ತು ಟ್ಯಾಕ್ಸಿ ಚಾಲಕರು ಅನಿಯಮಿತ ದರ ವಸೂಲಿ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದವು. ಇದನ್ನು ತಡೆಯಲು ಸಾರಿಗೆ ಇಲಾಖೆ ಜಾರಿಗೆ ತಂದಿರುವ ‘ಒಂದು ನಗರ, ಒಂದು ದರ’ ನಿಯಮವನ್ನೂ ಕೆಲವು ಕಂಪನಿಗಳು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಎಫ್‌ಸಿ ನವೀಕರಣಕ್ಕೆ ಮೀಟರ್ ಕಡ್ಡಾಯ

ಹೊಸ ಕ್ಯಾಬ್‌ಗಳ ನೋಂದಣಿ ಹಾಗೂ ಹಳೆಯ ಕ್ಯಾಬ್‌ಗಳ ವಾಹನ ಯೋಗ್ಯತಾ ಪ್ರಮಾಣಪತ್ರ ನವೀಕರಣಕ್ಕೆ ಫೇರ್ ಮೀಟರ್ ಕಡ್ಡಾಯವಾಗಿದೆ. ಮೀಟರ್ ಅಳವಡಿಸದ ವಾಹನಗಳ ವಾಹನ ಯೋಗ್ಯತಾ ಪ್ರಮಾಣಪತ್ರವನ್ನು ನವೀಕರಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಎಲ್ಲ ವರ್ಗದ ಟ್ಯಾಕ್ಸಿಗಳಿಗೆ ಅನ್ವಯ

ಆ್ಯಪ್ ಆಧಾರಿತ ಅಗ್ರಿಗೇಟರ್ ಕ್ಯಾಬ್‌ಗಳು, ಗುತ್ತಿಗೆ ಆಧಾರಿತ ವಾಹನಗಳು ಹಾಗೂ ಸ್ವತಂತ್ರ ಮೋಟಾರ್ ಕ್ಯಾಬ್‌ಗಳು ಸೇರಿದಂತೆ ರಾಜ್ಯದ ಎಲ್ಲ ವರ್ಗದ ಟ್ಯಾಕ್ಸಿಗಳಿಗೆ ಈ ನಿಯಮ ಅನ್ವಯಿಸಲಿದೆ.

ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ

ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರ ನಿಯಮ 129 ಹಾಗೂ ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್‌ಗಳ ನಿಯಮಗಳು, 2016ರ ನಿಯಮ 7ಡಿ ಪ್ರಕಾರ ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಸುವುದು ಕಡ್ಡಾಯವಾಗಿದೆ.

ಸರ್ಕಾರ ನಿಗದಿಪಡಿಸಿರುವ ದರದಲ್ಲೇ ಪ್ರಯಾಣಿಕರಿಗೆ ಸೇವೆ ಒದಗಿಸಬೇಕು. ಅಗತ್ಯ ಮೀಟರ್ ಅಳವಡಿಸದೆ ಸಂಚರಿಸುವ ವಾಹನಗಳ ವಿರುದ್ಧ ತಪಾಸಣೆ ನಡೆಸಿ, ವಾಹನಗಳನ್ನು ತಕ್ಷಣ ಜಪ್ತಿ ಮಾಡುವುದರ ಜತೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಾರಿಗೆ ಆಯುಕ್ತರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande