ಎಲ್ಪಿಜಿ ಗ್ರಾಹಕರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಇಂದು ಕೊನೆಯ ದಿನ
ಗ್ರಾಹಕರಿಗೆ ಎಚ್ಚರಿಕೆ
ಎಲ್ಪಿಜಿ ಗ್ರಾಹಕರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಇಂದು ಕೊನೆಯ ದಿನ


ಬೆಂಗಳೂರು, 07ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಅಡುಗೆ ಅನಿಲ (ಎಲ್‌ಪಿಜಿ) ಗ್ರಾಹಕರು ತಮ್ಮ ಗ್ಯಾಸ್ ಸಂಪರ್ಕದ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್ 7 ಕೊನೆಯ ದಿನವಾಗಿದೆ. ಇದುವರೆಗೆ ಕೆವೈಸಿ ಮಾಡಿಸಿಕೊಳ್ಳದ ಗ್ರಾಹಕರು ಯಾವುದೇ ವಿಳಂಬವಿಲ್ಲದೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಸೂಚಿಸಿದೆ.

ಈಗಾಗಲೇ ಹಲವು ಬಾರಿ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗಡುವು ವಿಸ್ತರಣೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ತಿಳಿಸಿದ್ದಾರೆ.

ಸಬ್ಸಿಡಿ ಸ್ಥಗಿತದ ಆತಂಕ: ನಿಗದಿತ ಅವಧಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಸಿಲಿಂಡರ್ ಸಬ್ಸಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಗ್ರಾಹಕರು ಸಿಲಿಂಡರ್ ಅನ್ನು ಸಾಮಾನ್ಯ ಚಿಲ್ಲರೆ ದರದಲ್ಲಿ ಖರೀದಿಸಬೇಕಾಗಬಹುದು. ಬಳಿಕ ಕೆವೈಸಿ ಪೂರ್ಣಗೊಳಿಸಿದರೆ ಸಬ್ಸಿಡಿ ಸೌಲಭ್ಯ ಪುನಃ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

ಮೊಬೈಲ್ ಮೂಲಕ ಇ-ಕೆವೈಸಿ: ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಮನೆಯಲ್ಲಿಯೇ ಇ-ಕೆವೈಸಿ ಪೂರ್ಣಗೊಳಿಸಬಹುದು. ಇಂಡೇನ್ ಗ್ರಾಹಕರು ‘ಇಂಡಿಯನ್‌ಆಯಿಲ್ ಒನ್’, ಭಾರತ್ ಗ್ಯಾಸ್ ಗ್ರಾಹಕರು ‘ಹಲೋ ಬಿಪಿಸಿಎಲ್’ ಹಾಗೂ ಎಚ್‌ಪಿ ಗ್ಯಾಸ್ ಗ್ರಾಹಕರು ‘ಎಚ್‌ಪಿ ಪೇ’ ಅಪ್ಲಿಕೇಶನ್ ಬಳಸಬಹುದು.

ಅಪ್ಲಿಕೇಶನ್‌ನಲ್ಲಿರುವ ಇ-ಕೆವೈಸಿ ಆಯ್ಕೆ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ದೃಢೀಕರಣ ಪೂರ್ಣಗೊಳಿಸಬೇಕು. ಅಗತ್ಯವಿದ್ದಲ್ಲಿ ಆಧಾರ್ ಮುಖ ಪರಿಶೀಲನೆಗಾಗಿ ‘ಆಧಾರ್ ಫೇಸ್ ಆರ್‌ಡಿ’ ಅಪ್ಲಿಕೇಶನ್ ಬಳಸಬಹುದು.

ಗ್ಯಾಸ್ ಏಜೆನ್ಸಿಯಲ್ಲೂ ಅವಕಾಶ: ಆನ್‌ಲೈನ್ ಮೂಲಕ ಇ-ಕೆವೈಸಿ ಮಾಡಲು ಸಾಧ್ಯವಾಗದವರು ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಪಾಸ್‌ಬುಕ್ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಸಿಲಿಂಡರ್ ವಿತರಿಸಲು ಬರುವ ಸಿಬ್ಬಂದಿಯ ಬಳಿಯಿರುವ ಬಯೋಮೆಟ್ರಿಕ್ ಸಾಧನದ ಮೂಲಕವೂ ಸ್ಥಳದಲ್ಲೇ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿದೆ.

ಮುಂದಿನ ದಿನಗಳಲ್ಲಿ ಸಬ್ಸಿಡಿ ಸೇರಿದಂತೆ ಸೌಲಭ್ಯಗಳು ನಿರಂತರವಾಗಿ ದೊರೆಯಲು ಅರ್ಹ ಗ್ರಾಹಕರು ಕೂಡಲೇ ಇ-ಕೆವೈಸಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande