
ದೇವನಹಳ್ಳಿ, 07 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ನವ ಯುವ ಪೀಳಿಗೆಯ ಅಗತ್ಯ ಮತ್ತು ಆಲೋಚನೆಗಳಿಗೆ ಅನುಗುಣವಾಗಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ನಡೆದ ರಾಮಯ್ಯ ವಿಜ್ಞಾನ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆ ಉದ್ಘಾಟನೆ ಹಾಗೂ ನಾರಾಯಣ ಪ್ರಜ್ಞಾಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ಶಿಕ್ಷಣ ನೀತಿ ಕುರಿತು ಚರ್ಚಿಸಲು ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ದೆಹಲಿಯಲ್ಲಿ ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಭೆ ರದ್ದಾಯಿತು’ ಎಂದು ತಿಳಿಸಿದರು.
ಕರ್ನಾಟಕದ ವಿದ್ಯಾರ್ಥಿಗಳ ಪ್ರತಿಭೆಗೆ ವಿಶ್ವದ 80ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಆಸಕ್ತಿ ತೋರುತ್ತಿವೆ. ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ ಅದು ಬೆಂಗಳೂರು ಮತ್ತು ಕರ್ನಾಟಕದ ಮೂಲಕವೇ ಸಾಧ್ಯ ಎಂದು ಇತ್ತೀಚೆಗೆ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ತಿಳಿಸಿದ್ದಾಗಿ ಹೇಳಿದರು.
ಜಯರಾಂ ಅವರು ಗುರು ಸಮಾನರುಎಂ.ಎಸ್. ರಾಮಯ್ಯ ಕುಟುಂಬದ ಶಿಕ್ಷಣ ಕ್ಷೇತ್ರದ ಕೊಡುಗೆ ಅಪಾರ. ರಾಮಯ್ಯ ಅವರು ಬೆಂಗಳೂರು ಮತ್ತು ಕರ್ನಾಟಕದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜಯರಾಂ ಅವರೊಂದಿಗೆ ತಮ್ಮ ಪರಿಚಯ ಸುಮಾರು 40 ವರ್ಷಗಳಷ್ಟು ಹಳೆಯದು. ಅವರನ್ನು ಗುರು ಸಮಾನರಾಗಿ ಗೌರವಿಸುತ್ತೇನೆ.
ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ ಎಂದು ಶಿವಕುಮಾರ್ ಹೇಳಿದರು.ಎಂ.ಎಸ್. ರಾಮಯ್ಯ ಸಂಸ್ಥೆಯು ಜೆಎಸ್ಡಬ್ಲ್ಯು ಸಮೂಹದ ಸಜ್ಜನ್ ಜಿಂದಾಲ್ ಸೇರಿದಂತೆ ಹಲವು ಉದ್ಯಮಿಗಳು ಹಾಗೂ ನಾಯಕರನ್ನು ರೂಪಿಸಿದೆ. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮೂಹವೂ ದೊಡ್ಡದಾಗಿದೆ ಎಂದರು.
ರಾಮಯ್ಯ ಕುಟುಂಬದ ಆಸ್ತಿ ಹಾಗೂ ಜ್ಞಾನವು ಸಮಾಜ ನಿರ್ಮಾಣಕ್ಕೆ ಮುಡಿಪಾಗಿದೆ. ಮರ, ನದಿ ಮತ್ತು ಹಸುಗಳು ತಮ್ಮಗಾಗಿ ಬದುಕದೆ ಸಮಾಜಕ್ಕೆ ಕೊಡುಗೆ ನೀಡುವಂತೆ ರಾಮಯ್ಯ ಕುಟುಂಬವೂ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದೆ ಎಂದು ಶ್ಲೋಕ ಉಲ್ಲೇಖಿಸಿ ಹೇಳಿದರು.
ಬೆಂಗಳೂರು ವಿದೇಶಿ ಉದ್ಯಮಿಗಳ ನೆಚ್ಚಿನ ತಾಣ:9/11 ದುರಂತದ ಬಳಿಕ ಅಮೆರಿಕ ಸುರಕ್ಷಿತ ನಗರಗಳಿಗಾಗಿ ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳನ್ನು ಪರಿಶೀಲಿಸಿತ್ತು. ಜ್ಞಾನ, ಸಂಸ್ಕೃತಿ ಮತ್ತು ಪ್ರತಿಭೆಯ ಕಾರಣಕ್ಕೆ ಬೆಂಗಳೂರು ಅಂತಿಮವಾಗಿ ಆಯ್ಕೆಯಾಯಿತು ಎಂದು ಶಿವಕುಮಾರ್ ಹೇಳಿದರು.
ದಾವೋಸ್ಗೆ ತೆರಳಿದ ಸಂದರ್ಭದಲ್ಲೂ ಅನೇಕ ಉದ್ಯಮಿಗಳು ಬೆಂಗಳೂರಿನ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಉದ್ಯಮ ನಡೆಸುವ ವೆಚ್ಚ ಕಡಿಮೆ ಇರುವುದರಿಂದ ಹೂಡಿಕೆದಾರರು ಬೆಂಗಳೂರನ್ನು ಮೊದಲ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 138 ಅಂತಾರಾಷ್ಟ್ರೀಯ ಶಾಲೆಗಳ ಪೈಕಿ 37 ಶಾಲೆಗಳಿವೆ. ಪ್ರತಿ ವರ್ಷ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಇಂಜಿನಿಯರ್ಗಳು ಹಾಗೂ 59 ವೈದ್ಯಕೀಯ ಕಾಲೇಜುಗಳಿಂದ 13,940 ವೈದ್ಯರು ಹೊರಬರುತ್ತಿದ್ದಾರೆ. 1.2 ಲಕ್ಷಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಸಿಬ್ಬಂದಿಯೂ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.ಸಿಲಿಕಾನ್ ವ್ಯಾಲಿಯಲ್ಲಿ ಸುಮಾರು 16 ಲಕ್ಷ ಐಟಿ ವೃತ್ತಿಪರರಿದ್ದರೆ, ಬೆಂಗಳೂರೊಂದರಲ್ಲೇ 26 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಇದು ಬೆಂಗಳೂರಿನ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು.
ಫಾಕ್ಸ್ಕಾನ್ ಸಂಸ್ಥೆಯಲ್ಲಿ ಸುಮಾರು 50 ಸಾವಿರ ಯುವಕರು ಉದ್ಯೋಗ ಪಡೆದಿದ್ದು, ವಸತಿ ಮತ್ತು ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಮೆರಿಕದ ಸುಂಕ ಸಮಸ್ಯೆಯ ನಡುವೆಯೂ ಉದ್ಯಮಿಗಳು ಭಾರತ ಮತ್ತು ಬೆಂಗಳೂರನ್ನು ಸುರಕ್ಷಿತ ಹೂಡಿಕೆ ತಾಣವಾಗಿ ಪರಿಗಣಿಸುತ್ತಿದ್ದಾರೆ ಎಂದು ಹೇಳಿದರು.‘ನ್ಯೂಜಿಲೆಂಡ್ಗೆ ತೆರಳಿದ್ದಾಗ ಅಲ್ಲಿನವರು ಪದವಿಗಿಂತ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದನ್ನು ಗಮನಿಸಿದೆ. ನಮ್ಮ ಯುವಕರು ಕೌಶಲ್ಯಾಧಾರಿತ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು’ ಎಂದು ಶಿವಕುಮಾರ್ ಕರೆ ನೀಡಿದರು.
‘ನಾನು ಹುಟ್ಟಿನಿಂದ ರೈತ, ವೃತ್ತಿಯಿಂದ ಉದ್ಯಮಿ, ಆಯ್ಕೆಯಿಂದ ಶಿಕ್ಷಣತಜ್ಞ ಹಾಗೂ ಆಸಕ್ತಿಯಿಂದ ರಾಜಕಾರಣಿ. ಆದರೆ ನನ್ನ ಹೃದಯ ಇರುವುದು ಶಿಕ್ಷಣ ಕ್ಷೇತ್ರದಲ್ಲಿ. ಜಯರಾಂ ಅವರೂ ತಮ್ಮ ಜೀವನವನ್ನು ಶಿಕ್ಷಣ ಕ್ಷೇತ್ರಕ್ಕೆ ಮುಡಿಪಾಗಿಟ್ಟಿದ್ದಾರೆ. ಅವರು ಇತಿಹಾಸ ಓದುವವರಲ್ಲ, ಇತಿಹಾಸ ಸೃಷ್ಟಿಸುವವರು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R