
ಬೆಂಗಳೂರು, 07ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ರಾಜ್ಯ ಸರ್ಕಾರದ ಬರ ನಿರ್ವಹಣೆ, ಪ್ರತಿಪಕ್ಷ ಶಾಸಕರ ಕ್ಷೇತ್ರಗಳ ಕಡೆಗಣನೆ ಹಾಗೂ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಬಳಿ ಗುರುಮಿಠಕಲ್ ಕ್ಷೇತ್ರವನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಶರಣುಗೌಡ ಕಂದಕೂರ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಘೋಷಿತ ಬರಪೀಡಿತ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ನ ಕೇವಲ 17 ಕ್ಷೇತ್ರಗಳು ಮಾತ್ರ ಸೇರಿವೆ. ಉಳಿದ ಕ್ಷೇತ್ರಗಳು ಆಡಳಿತ ಪಕ್ಷದ ಶಾಸಕರಿಗೆ ಸೇರಿದವುಗಳಾಗಿದ್ದು, ಪ್ರತಿಪಕ್ಷ ಶಾಸಕರ ಕ್ಷೇತ್ರಗಳ ವಿರುದ್ಧ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಬಾರಿ ಶಾಸಕರಾಗಿದ್ದ ಗುರುಮಿಠಕಲ್ ಕ್ಷೇತ್ರ ತೀವ್ರ ಹಿಂದುಳಿದಿದ್ದು, ಭೀಕರ ಬರ ಎದುರಿಸುತ್ತಿದ್ದರೂ ಅದನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ. ಜೆಡಿಎಸ್ ಶಾಸಕ ಶರಣುಗೌಡ ಕಂದಕೂರ ಅವರಿದ್ದಾರೆಯೆಂಬ ಕಾರಣಕ್ಕೆ ಅಲ್ಲಿನ ಜನರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದರು.
ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ, ಅಧಿವೇಶನದ ಅವಧಿ ಮುಗಿಯಲು ಮೂರು ದಿನ ಬಾಕಿ ಇರುವಾಗಲೇ ಸದನವನ್ನು ಮೊಟಕುಗೊಳಿಸಿ ವಿಶೇಷ ಅಧಿವೇಶನ ಕರೆದಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಬಿಜೆಪಿ ಆರು ತಂಡಗಳನ್ನು ರಚಿಸಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬರ ಪರಿಸ್ಥಿತಿ ಇರುವುದಾಗಿ ವರದಿ ನೀಡಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಹೊಸದಾಗಿ ನೇಮಕಗೊಂಡ ಸಚಿವರು ಜಿಲ್ಲೆಗಳಿಗೆ ತೆರಳಿ ಬರ ಪರಿಸ್ಥಿತಿ ಪರಿಶೀಲಿಸುವ ಬದಲು ಸನ್ಮಾನ ಮಾಡಿಸಿಕೊಳ್ಳುವುದರಲ್ಲಿ ತೊಡಗಿದ್ದರು. ಬಿಜೆಪಿ ಪಾದಯಾತ್ರೆ ಆರಂಭಿಸಿದ ಬಳಿಕವೇ ಸರ್ಕಾರ ಎಚ್ಚೆತ್ತುಕೊಂಡು 200 ಕ್ಷೇತ್ರಗಳನ್ನು ಬರಪೀಡಿತವೆಂದು ಘೋಷಿಸಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಮುಖ್ಯಮಂತ್ರಿ ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಿದ್ದಾರೆ. ಜನರೊಂದಿಗೆ ಬೆರೆಯದೆ ಜನಪರ ಸರ್ಕಾರವಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ಸಿಕ್ಕ ಬಳಿಕ ಮತ್ತೆ ಸಚಿವರನ್ನಾಗಿ ಮಾಡುತ್ತೇವೆ ಎಂಬ ಹೇಳಿಕೆಯನ್ನು ಟೀಕಿಸಿದ ಅವರು, ಇಂತಹ ಕ್ಲೀನ್‌ಚಿಟ್‌ಗಳು ಯಾವ ಕಾರ್ಖಾನೆಯಲ್ಲಿ ತಯಾರಾಗುತ್ತಿವೆ ಎಂದು ವ್ಯಂಗ್ಯವಾಡಿದರು.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಮರ್ಪಕವಾಗಿ ನೀಡದೆ ಮಹಿಳೆಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಶಾಲಾ ಮಕ್ಕಳ ಶೂಗಳ ಹಣದಲ್ಲೂ ಅವ್ಯವಹಾರ ನಡೆದಿದೆ. ಹಿಂದಿನ ಸರ್ಕಾರ ಹೆಚ್ಚಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹಿಂಪಡೆಯುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕರಲ್ಲಿಯೂ ಅತೃಪ್ತಿ ಹೆಚ್ಚಾಗಿದ್ದು, ಅದು ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಅತೃಪ್ತಿ ಸ್ಫೋಟಗೊಂಡರೆ ಸರ್ಕಾರವೇ ಉಳಿಯುವುದಿಲ್ಲ. ಬಿಜೆಪಿಯ ‘ಸ್ಪಿನ್ ಬೌಲಿಂಗ್’ಗೆ ಮುಂದಿನ ದಿನಗಳಲ್ಲಿ ಸರ್ಕಾರದ ಮುಖ್ಯ ವಿಕೆಟ್ ಸೇರಿದಂತೆ ಹಲವು ವಿಕೆಟ್‌ಗಳು ಉರುಳಲಿವೆ ಎಂದು ಎಚ್ಚರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R