ಕಾವೇರಿ 6ನೇ ಹಂತದ ಯೋಜನೆ ಹೆಸರಿನಲ್ಲಿ ₹7,000 ಕೋಟಿ ಲೂಟಿ: ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪ
ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ
ಕಾವೇರಿ 6ನೇ ಹಂತದ ಯೋಜನೆ ಹೆಸರಿನಲ್ಲಿ ₹7,000 ಕೋಟಿ ಲೂಟಿ: ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪ


ಬೆಂಗಳೂರು, 07ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ರಾಜ್ಯ ಸರ್ಕಾರದ ಅಸಮರ್ಥತೆ ಹಾಗೂ ಭ್ರಷ್ಟಾಚಾರದಿಂದಾಗಿ ಬೆಂಗಳೂರಿಗೆ ಪೂರೈಕೆಯಾಗುವ ಕಾವೇರಿ ನೀರಿನಲ್ಲಿ ಶೇ.30ರಷ್ಟು ಪೋಲಾಗುತ್ತಿದೆ. ಇದೀಗ ‘ಕಾವೇರಿ 6ನೇ ಹಂತ’ದ ಹೆಸರಿನಲ್ಲಿ ₹7 ಸಾವಿರ ಕೋಟಿ ವೆಚ್ಚದ ಹೊಸ ಹಗರಣಕ್ಕೆ ಕಾಂಗ್ರೆಸ್ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರಿಗೆ ಪೂರೈಕೆಯಾಗುವ ಕುಡಿಯುವ ನೀರಿನಲ್ಲಿ ಶೇ.30ರಷ್ಟು ‘ಲೆಕ್ಕಕ್ಕೆ ಸಿಗದ ನೀರು’ (ಎನ್‌ಆರ್‌ಡಬ್ಲ್ಯು) ಆಗಿ ಸೋರಿಕೆಯಾಗುತ್ತಿದೆ. ಜಲಮಂಡಳಿಯ ದುರಾಡಳಿತದಿಂದ ಪ್ರತಿನಿತ್ಯ ಕೋಟ್ಯಂತರ ಲೀಟರ್ ನೀರು ವ್ಯರ್ಥವಾಗುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ್ದಾರೆ.

ಈಗಿರುವ ಜಾಲದಲ್ಲಿನ ಸೋರಿಕೆ ಹಾಗೂ ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಿ ಸರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಕಮಿಷನ್‌ಗಾಗಿ ‘ಕಾವೇರಿ 6ನೇ ಹಂತ’ದ ಹೆಸರಿನಲ್ಲಿ ₹7 ಸಾವಿರ ಕೋಟಿ ವೆಚ್ಚದ ಹೊಸ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆಗಳ ಹೊಣೆ ಹೊತ್ತಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಸ್ತುತ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರ ಅಸಮರ್ಥ ಆಡಳಿತವೇ ಬೆಂಗಳೂರಿನ ಈ ದುಸ್ಥಿತಿಗೆ ಕಾರಣ ಎಂದು ಅಶೋಕ್ ಟೀಕಿಸಿದ್ದಾರೆ.

ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡುವ ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಬದಲು, ಪೋಲಾಗುತ್ತಿರುವ ಅಮೂಲ್ಯ ನೀರನ್ನು ಉಳಿಸಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನ ಜನರು ಹನಿ ನೀರಿಗೂ ಪರದಾಡುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಕಮಿಷನ್ ದಂಧೆಗೆ ಬಳಸಿಕೊಳ್ಳುತ್ತಿರುವ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande