ಮಳೆಗಾಲದಲ್ಲೂ ಬೆಂಗಳೂರಿನಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ
ಸೆಪ್ಟೆಂಬರ್ನಲ್ಲಿ 31.7 ಡಿಗ್ರಿ ಸೆಲ್ಶಿಯಸ್ ದಾಖಲು
ಮಳೆಗಾಲದಲ್ಲೂ ಬೆಂಗಳೂರಿನಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ


ಬೆಂಗಳೂರು, 07ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಕರ್ನಾಟಕದಲ್ಲಿ ಮಳೆಗಾಲದ ಅವಧಿಯಲ್ಲೂ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮೂರು ವರ್ಷಗಳ ಬಳಿಕ 30 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿರುವುದು ವಿಶೇಷವಾಗಿದೆ.

ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಅವರು ನೀಡಿದ ಮಾಹಿತಿ ಪ್ರಕಾರ, ಮಳೆ ಮತ್ತು ಮೋಡಗಳ ಪ್ರಮಾಣ ಕಡಿಮೆಯಾಗಿರುವುದು ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಎಲ್ ನಿನೊ ಪರಿಣಾಮವೂ ವಾತಾವರಣದ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಪಮಾನ ದಾಖಲೆ: ಕಳೆದ ಒಂದು ವಾರದಿಂದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, 2023ರ ಸೆಪ್ಟೆಂಬರ್ನಲ್ಲಿ 32.6 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.

ಮುನ್ಸೂಚನೆ: ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಆಸುಪಾಸಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸೆಪ್ಟೆಂಬರ್ 16ರವರೆಗೆ ಭಾಗಶಃ ಮೋಡ ಕವಿದ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯಲಿದೆ.

ಹವಾಮಾನ ವೈಪರೀತ್ಯಕ್ಕೆ ಕಾರಣ: ಸಾಮಾನ್ಯವಾಗಿ ಸೆಪ್ಟೆಂಬರ್ನಲ್ಲಿ ಮಳೆ, ಮೋಡ ಮತ್ತು ತಂಪಾದ ವಾತಾವರಣವಿರುತ್ತದೆ. ಆದರೆ ಮಳೆ ಮತ್ತು ಮೋಡಗಳ ಕೊರತೆಯಿಂದ ಸೂರ್ಯನ ಶಾಖ ನೇರವಾಗಿ ಭೂಮಿಗೆ ಬೀಳುತ್ತಿರುವುದು ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗಿದೆ.

ರಾಜ್ಯದ ಇತರ ಭಾಗಗಳು: ಬೆಂಗಳೂರಿನ ಜೊತೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳು, ಕಲಬುರಗಿ, ಉಡುಪಿ ಹಾಗೂ ಮಂಗಳೂರು ಭಾಗಗಳಲ್ಲೂ ತಾಪಮಾನ ಏರಿಕೆ ಕಂಡುಬರುತ್ತಿದೆ.

ಸಾಮಾನ್ಯವಾಗಿ ಸ್ವೆಟರ್ ಧರಿಸಿ ಮಳೆಯಿಂದ ರಕ್ಷಿಸಿಕೊಳ್ಳಬೇಕಿದ್ದ ಸೆಪ್ಟೆಂಬರ್ ತಿಂಗಳಿನಲ್ಲಿ, ಈ ಬಾರಿ ಜನರು ಸೆಕೆಯಿಂದ ತಪ್ಪಿಸಿಕೊಳ್ಳಲು ಪರದಾಡುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande