ಅಳತೆಗೆ ತಕ್ಕಂತೆ ಕೆಲಸ ಮಾಡಿ ಪೂರ್ಣ ಕೂಲಿ ಪಡೆಯಿರಿ
ಗದಗ, 07 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕದಾಳ ಗ್ರಾಮದಲ್ಲಿ ವ್ಹಿಬಿಜಿರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಭೇಟಿ ನೀಡಿ ಪ
ಫೋಟೋ


ಗದಗ, 07 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕದಾಳ ಗ್ರಾಮದಲ್ಲಿ ವ್ಹಿಬಿಜಿರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಭೇಟಿ ನೀಡಿ ಪರಿಶೀಲಿಸಿದರು.

ಕಾಮಗಾರಿ ಸ್ಥಳದಲ್ಲಿದ್ದ ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯಡಿ ದೊರೆಯುವ ಸೌಲಭ್ಯಗಳು, ಕೂಲಿ ಪಾವತಿ ಹಾಗೂ ಹಾಜರಾತಿ ನಿಯಮಗಳ ಕುರಿತು ಮಾಹಿತಿ ನೀಡಿದರು.

ಯೋಜನೆಯಡಿ ದಿನಕ್ಕೆ ₹382 ಕೂಲಿ ನಿಗದಿಪಡಿಸಲಾಗಿದೆ. ಕಾರ್ಮಿಕರು ಅಳತೆಗೆ ಅನುಗುಣವಾಗಿ ನಿಗದಿತ ಪ್ರಮಾಣದ ಕೆಲಸ ಮಾಡಿದರೆ ಪೂರ್ಣ ಕೂಲಿ ದೊರೆಯಲಿದೆ. ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ ಅದರಂತೆ ಕೂಲಿ ಮೊತ್ತದಲ್ಲೂ ವ್ಯತ್ಯಾಸವಾಗಲಿದೆ. ಆದ್ದರಿಂದ ಕಾರ್ಮಿಕರು ಅಳತೆಗೆ ತಕ್ಕಂತೆ ಕೆಲಸ ಮಾಡಿ ಪೂರ್ಣ ಕೂಲಿ ಪಡೆಯಬೇಕು ಎಂದು ಅವರು ತಿಳಿಸಿದರು.

ಕೂಲಿಕಾರ್ಮಿಕರು ನಿರಂತರವಾಗಿ ಕೆಲಸ ಒದಗಿಸುವಂತೆ ಮನವಿ ಮಾಡಿದಾಗ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ವ್ಹಿಬಿಜಿರಾಮ್ ಜಿ ಯೋಜನೆಯಡಿ ನಿರಂತರವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿಗಳಲ್ಲಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಒ ಹೇಳಿದರು.

ಬಳಿಕ ವೈಯಕ್ತಿಕವಾಗಿ ಇಓ ಅವರನ್ನು ಭೇಟಿಯಾದ ಕೂಲಿಕಾರ್ಮಿಕರು ನಮೂನೆ-೬ ಕೊಟ್ಟು ೧೫ ದಿನಗಳಲ್ಲಿ ಕೆಲಸ ಕೊಡದೇ ಇದ್ದ ಸಂದರ್ಭದಲ್ಲಿ ಕೂಲಿಕಾರ್ಮಿಕರು ಕೆಲಸಕ್ಕಾಗಿ ಏನು ಮಾಡುವುದು ಅಂತ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಓ ಅವರು ಮೊದಲು ನಮೂನೆ-೬ ಕೊಡಿ ಮುಂದಿನ ೧೫ ದಿನಗಳಲ್ಲಿ ಕೆಲಸ ಕೊಡಲಾಗುವುದು. ಒಂದ್ವೇಳೆ ೧೫ ದಿನಗಳಲ್ಲಿ ನಮ್ಮ ಸಿಬ್ಬಂದಿಗಳಿಂದ ಕೆಲಸ ಕೊಡಲು ಸಾಧ್ಯವಾಗದಿದ್ದರೆ ವ್ಹಿಬಿಜಿರಾಮ್ ಯೋಜನೆಯಲ್ಲಿನ ನಿರುದ್ಯೋಗ ಭತ್ಯೆ ಕೊಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಅಂತ ತಿಳಿಸಿದರು.

ಎರಡು ಹಾಜರಾತಿಗೂ ಕಡ್ಡಾಯ

ಕಾಮಗಾರಿ ಸ್ಥಳದಲ್ಲಿ ದಿನದ ಎರಡೂ ಹಾಜರಾತಿಗಳಿಗೆ ಕಾರ್ಮಿಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದು ಹಾಜರಾತಿಗೆ ಮಾತ್ರ ಹಾಜರಾಗಿ ಮತ್ತೊಂದಕ್ಕೆ ಗೈರಾದಲ್ಲಿ ಕೂಲಿ ಪಾವತಿಗೆ ತೊಂದರೆಯಾಗಲಿದೆ. ಹೀಗಾಗಿ ಎರಡೂ ಹಾಜರಾತಿಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದರು.

ವ್ಹಿಬಿಜಿರಾಮ್ ಜಿ ಯೋಜನೆಯಡಿ ವರ್ಷಕ್ಕೆ 125 ದಿನಗಳ ಉದ್ಯೋಗ ಒದಗಿಸುವ ಅವಕಾಶವಿದ್ದು, ಅರ್ಹ ಕೂಲಿಕಾರ್ಮಿಕರಿಗೆ ವರ್ಷದಲ್ಲಿ 125 ದಿನಗಳವರೆಗೆ ಕೆಲಸ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಧರ್ ಚಿನಗುಂಡಿ ತಿಳಿಸಿದರು.

ಈ ಸಂದರ್ಭದಲ್ಲಿ ಬೆನಕನಕೊಪ್ಪ ಗ್ರಾಪಂ ಪಿಡಿಒ ವಿ.ಆರ್. ರಾಯನಗೌಡರ, ವ್ಹಿಬಿಜಿರಾಮ್ ಸಿಬ್ಬಂದಿ ಹನುಮಂತ ಡಂಬಳ, ಲಿಂಗರಾಜ ಮುದಿಗೌಡರ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande