
ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಬರ ತಾಲೂಕುಗಳ ಘೋಷಣೆಯಲ್ಲಿ ತಾರತಮ್ಯ ಆಗಿರುವ ಕುರಿತು ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಎಸ್. ಅಪ್ಪಾಜಿ ನಾಡಗೌಡ ಬಹಿರಂಗ ಹೇಳಿಕೆ ನೀಡಿರುವುದು, ಬರ ನಿರ್ವಹಣೆ ಮತ್ತು ರೈತರ ನೆರವಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಬೇಕಾಬಿಟ್ಟಿ ವರ್ತನೆಯನ್ನು ಖುಲ್ಲಂಖುಲ್ಲಾ ತೆರೆದಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಎಲ್ಲ ವಿಚಾರಗಳಲ್ಲೂ ಪಾರದರ್ಶಕತೆಯನ್ನು ಗಾಳಿಗೆ ತೂರಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
190ಕ್ಕೂ ಹೆಚ್ಚು ಬರ ತಾಲೂಕುಗಳಿದ್ದರೂ ಸರ್ಕಾರ ಕೇವಲ 101 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ ಎಂದು ಬಿಜೆಪಿ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಕಾಂಗ್ರೆಸ್ ಶಾಸಕ ಅಪ್ಪಾಜಿ ನಾಡಗೌಡ ಅವರ ಹೇಳಿಕೆ ಬಿಜೆಪಿ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯ ಒದಗಿಸಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಸತ್ಯವನ್ನು ಒಪ್ಪಿಕೊಂಡು ತಪ್ಪು ಸರಿಪಡಿಸುವ ಬದಲು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಶಾಸಕ ನಾಡಗೌಡರ ಹೇಳಿಕೆಗೆ ಕಾಗಕ್ಕ-ಗುಬ್ಬಕ್ಕನ ಕತೆ ಹೇಳುವ ಮೂಲಕ ಸತ್ಯವನ್ನು ಮರೆಮಾಚಲು ಹಾಗೂ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕ ನಾಡಗೌಡರ ಹೇಳಿಕೆ ಮತ್ತು ಸಚಿವ ಎಂ.ಬಿ. ಪಾಟೀಲರ ಪ್ರತಿಕ್ರಿಯೆ ಕಾಂಗ್ರೆಸ್ ಸರ್ಕಾರದ ಹುಳುಕು ಹಾಗೂ ಆಂತರಿಕ ಕಚ್ಚಾಟವನ್ನು ಬೀದಿ ರಂಪಾಟದ ಮಟ್ಟಕ್ಕೆ ತಂದಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ನಿಮ್ಮೊಳಗಿನ ಪ್ರತಿಷ್ಠೆ ಕಾದಾಟ, ಆಟ-ಮೇಲಾಟ ಏನೇ ಇರಲಿ. ಮೊದಲು ಬರ ನಿರ್ವಹಣೆ ಸೇರಿದಂತೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಡೆ ಗಮನ ಕೊಡಿ. ಇಲ್ಲವಾದರೆ ಈ ಸರ್ಕಾರದ ವಿರುದ್ಧ ಜನರೇ ಬೀದಿಗಿಳಿಯುವ ದಿನಗಳು ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.