
ಗದಗ, 07 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಬಳ್ಳಾರಿ ಚಲೋ ಪಾದಯಾತ್ರೆಯ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಗದಗ ವಿಧಾನಸಭಾ ಮತಕ್ಷೇತ್ರದ 2028ರ ಚುನಾವಣೆ ಕುರಿತು ನೀಡಿರುವ ಹೇಳಿಕೆ ಅಪಪ್ರಸ್ತುತ ಹಾಗೂ ಅಸಮಂಜಸವಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದ್ದಾರೆ
ಗದಗ ನಗರದಲ್ಲಿ ಮಾತನಾಡಿದ ಅವರು, ಕಳೆದ ಸುಮಾರು 30 ವರ್ಷಗಳಿಂದ ಗದಗ-ಬೆಟಗೇರಿ ಜನತೆಯೊಂದಿಗೆ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದು, ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೇನೆ. ಅಲ್ಲದೇ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಗದಗ ಪರಿಸರದಲ್ಲಿ ಜನರೊಂದಿಗೆ ನಿರಂತರ ಒಡನಾಟ ಹೊಂದಿದ್ದೇನೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾನೂ ಕೂಡ ಆಕಾಂಕ್ಷಿಯಾಗಿದ್ದೇನೆ. ಗದಗ-ಬೆಟಗೇರಿ ಸೇರಿದಂತೆ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಎನ್ಡಿಎ ಟಿಕೆಟ್ಗಾಗಿ ಹಲವಾರು ಆಕಾಂಕ್ಷಿಗಳಿದ್ದು, ಅಭ್ಯರ್ಥಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪಕ್ಷದ ವರಿಷ್ಠರು ಹಾಗೂ ಎನ್ಡಿಎ ಸಮನ್ವಯ ಸಮಿತಿಯ ವ್ಯಾಪ್ತಿಗೆ ಬರುತ್ತದೆ. ಹೀಗಿರುವಾಗ ಈಗಲೇ ಯಾವುದೇ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸುವ ಮೂಲಕ ಗೊಂದಲ ಸೃಷ್ಟಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀರಾಮುಲು ಅವರು ಅನಿಲ್ ಮೆಣಸಿನಕಾಯಿ ಅವರ ಹೆಸರನ್ನು ಪ್ರಸ್ತಾಪಿಸಿರುವುದು ಕ್ಷೇತ್ರದ ಎನ್ಡಿಎ ಆಕಾಂಕ್ಷಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅನಿಲ್ ಮೆಣಸಿನಕಾಯಿ ಅವರು ಈ ಹಿಂದೆ ಬಿಎಸ್ಆರ್ ಪಕ್ಷದಿಂದ ಒಮ್ಮೆ ಹಾಗೂ ಬಿಜೆಪಿಯಿಂದ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಹಾಗೂ ಹೊಸ ಆಕಾಂಕ್ಷಿಗಳಿಗೆ ಅವಕಾಶ ನೀಡುವ ಅಗತ್ಯವಿದೆ. ಅಂತಹ ಹೊಸ ಆಕಾಂಕ್ಷಿಗಳಲ್ಲಿ ತಾನೂ ಒಬ್ಬನಾಗಿದ್ದೇನೆ ಎಂದು ಗೋವಿಂದಗೌಡ್ರ ಹೇಳಿದರು.
ತಮ್ಮ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಉಲ್ಲೇಖಿಸಿದ ಅವರು, ಈ ಹಿಂದೆ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಾವು ಕೈಗೊಂಡ ಹೋರಾಟವನ್ನು ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ತಾವು ಪ್ರತಿಭಟನೆಯಲ್ಲಿ ಭಾಗವಹಿಸಿ ಕೊನೆಯವರೆಗೂ ಹೋರಾಟದಿಂದ ಹಿಂದೆ ಸರಿಯದೆ ಎದೆಕೊಟ್ಟು ನಿಂತಿದ್ದಾಗಿ ತಿಳಿಸಿದರು.
ಅದೇ ರೀತಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚುನಾವಣೆಯಲ್ಲಿಯೂ ಮೈತ್ರಿ ಧರ್ಮವನ್ನು ಪಾಲಿಸಿಕೊಂಡು ಜೆಡಿಎಸ್ ಪಕ್ಷದ ವತಿಯಿಂದ ಯಾವುದೇ ಸಹಾಯ-ಸಹಕಾರ ಪಡೆಯದೆ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಲೀಡ್ ಬರಲು ಯಂಗ್ ಇಂಡಿಯಾ ಸದಸ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರ ಶ್ರಮವೂ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿಯೂ ತಮ್ಮ ಸಂಘಟನಾ ಚಟುವಟಿಕೆಗಳ ಮೂಲಕ 18 ಸಾವಿರಕ್ಕೂ ಅಧಿಕ ಮತಗಳ ನೋಂದಣಿಗೆ ಕಾರಣರಾಗಿದ್ದೇವೆ ಎಂದು ಹೇಳಿದ ಗೋವಿಂದಗೌಡ್ರ, ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಎನ್ಡಿಎ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿರುವುದನ್ನು ವಿವರಿಸಿದರು.
ಅಭ್ಯರ್ಥಿ ಆಯ್ಕೆ ಸಮನ್ವಯ ಸಮಿತಿಯದ್ದು
ಎನ್ಡಿಎ ಮೈತ್ರಿಯಡಿ ಗದಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಯಾವುದೇ ಒಬ್ಬ ನಾಯಕನ ವೈಯಕ್ತಿಕ ನಿರ್ಧಾರವಲ್ಲ. ಪಕ್ಷದ ವರಿಷ್ಠರು, ರಾಜ್ಯ ಹಾಗೂ ರಾಷ್ಟ್ರೀಯ ನಾಯಕತ್ವ ಮತ್ತು ಎನ್ಡಿಎ ಸಮನ್ವಯ ಸಮಿತಿ ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಆದ್ದರಿಂದ ಅಭ್ಯರ್ಥಿಗಳ ಕುರಿತು ಮುಂಚಿತವಾಗಿಯೇ ಹೇಳಿಕೆಗಳನ್ನು ನೀಡಿ ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳಲ್ಲಿ ಗೊಂದಲ ಮೂಡಿಸುವುದು ಬೇಡ ಎಂದು ಅವರು ಮನವಿ ಮಾಡಿದರು.
ತಾವು ಕೂಡ ಎನ್ಡಿಎ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದು, ತಮ್ಮ ಹೋರಾಟಗಳು, ಸಾಮಾಜಿಕ ಸೇವೆ ಹಾಗೂ ಗದಗ ಮತಕ್ಷೇತ್ರದ ಜನರೊಂದಿಗೆ ಹೊಂದಿರುವ ನಿರಂತರ ಒಡನಾಟವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲು ಮುಂದಾಗಿರುವುದಾಗಿ ತಿಳಿಸಿದರು.
ಈ ಸಂಬಂಧ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪತ್ರ ಬರೆದು ತಮ್ಮ ರಾಜಕೀಯ ಹೋರಾಟ, ಸಮಾಜ ಸೇವೆ ಹಾಗೂ ಕ್ಷೇತ್ರದ ಜನರೊಂದಿಗೆ ಹೊಂದಿರುವ ಸಂಬಂಧದ ಕುರಿತು ವಿವರವಾಗಿ ತಿಳಿಸಲಿದ್ದೇನೆ. ಗದಗ ವಿಧಾನಸಭಾ ಮತಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುವುದಾಗಿ ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದರು.
ಗದಗ ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿ ಬಲಪಡಿಸುವ ನಿಟ್ಟಿನಲ್ಲಿ ತಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ವರಿಷ್ಠರು ತಮ್ಮ ಸೇವೆ ಹಾಗೂ ಸಂಘಟನಾ ಸಾಮರ್ಥ್ಯವನ್ನು ಪರಿಗಣಿಸಿ ಅವಕಾಶ ನೀಡುವ ವಿಶ್ವಾಸವಿದೆ ಎಂದು ಅವರು ಹೇಳಿದರು.
2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದು, ಅಭ್ಯರ್ಥಿಗಳ ಕುರಿತು ಈಗಲೇ ಯಾವುದೇ ಅಂತಿಮ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಜನಪರ ಹೋರಾಟ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಅಂತಿಮವಾಗಿ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಗೋವಿಂದಗೌಡ್ರ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP