
ಗದಗ, 07 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಭಾವನೆ ಬೆಳೆಸುವಲ್ಲಿ ಜಾತ್ರಾಮಹೋತ್ಸವಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಜಗತ್ತಿಗೆ ಸಮಾನತೆ, ಸಹಬಾಳ್ವೆ, ಭಾತೃತ್ವ ಹಾಗೂ ಸಾಮರಸ್ಯದ ಸಂದೇಶವನ್ನು ಸಾರಿದ ಶ್ರೀಕ್ಷೇತ್ರ ವರವಿ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಧನ್ಯತೆಯ ಸಂಗತಿ ಎಂದು ಹೊಳೆ ಇಟಗಿಯ ಹಿರಿಯ ಮುಖಂಡ ಸಣ್ಣವೀರಪ್ಪ ಫ. ಹಳ್ಳೆಪ್ಪನವರ ಹೇಳಿದರು.
ಶ್ರೀಕ್ಷೇತ್ರ ವರವಿಯ ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ 2026ನೇ ಸಾಲಿನ ಜಾತ್ರಾಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀಕ್ಷೇತ್ರ ವರವಿಗೆ ಆಗಮಿಸಿ ಮೌನೇಶ್ವರರ ದರ್ಶನ ಪಡೆದು, ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುತ್ತಾರೆ. ಜಾತ್ರೆಯು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ಸೌಹಾರ್ದದ ವೇದಿಕೆಯಾಗಿದೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಜಾತ್ರಾಮಹೋತ್ಸವದ ಆಹ್ವಾನಕ್ಕೆ ಗೌರವ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಇದು ನಮ್ಮ ಮಠದ ಜಾತ್ರೆ ಎಂಬ ಭಾವನೆಯಿಂದ ಎಲ್ಲರೂ ಪಾಲ್ಗೊಂಡು ಮೌನೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ವಿಶ್ವಕರ್ಮ ಸಮಾಜವು ಎಲ್ಲರೊಂದಿಗೆ ಅರಿತು, ಬೆರೆತು ಬಾಳುವ ವಿಶಾಲ ಮನೋಭಾವ ಹೊಂದಿರುವ ಸಮಾಜವಾಗಿದೆ. ಬೇರೆಯವರನ್ನು ತಿದ್ದಿ, ತೀಡಿ, ಬುದ್ಧಿಹೇಳಿ, ಉತ್ತಮ ರೂಪ ನೀಡುವ ಬುದ್ಧಿವಂತಿಕೆ ಮತ್ತು ಕೌಶಲ್ಯವನ್ನು ಹೊಂದಿರುವ ಈ ಸಮಾಜದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು ಎಂದು ಅವರು ತಿಳಿಸಿದರು.
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಅಗತ್ಯ
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಬಾಗಲಕೋಟೆಯ ಖ್ಯಾತ ವೈದ್ಯ ಡಾ. ವಿನೋದ ಅಕ್ಕಸಾಲಿ ಮಾತನಾಡಿ, ಸಮಾಜ ಮತ್ತು ಸರ್ಕಾರದ ವ್ಯವಸ್ಥೆಯಲ್ಲಿ ವಿಶ್ವಕರ್ಮ ಸಮಾಜದ ಅನೇಕರು ಉತ್ತಮ ಸ್ಥಾನಗಳನ್ನು ಅಲಂಕರಿಸಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಮಾಜವು ಅವರ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ನಾವು ಎಷ್ಟೇ ಬುದ್ಧಿವಂತರಾಗಿದ್ದರೂ ಶಿಕ್ಷಣದ ಕೊರತೆಯಿದ್ದರೆ ಆ ಬುದ್ಧಿವಂತಿಕೆಗೆ ಸೂಕ್ತವಾದ ದಿಕ್ಕು ದೊರೆಯುವುದಿಲ್ಲ. ಆದ್ದರಿಂದ ವಿಶ್ವಕರ್ಮ ಸಮಾಜವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ಯುವಜನತೆ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಯುವಕರು ಮಾದಕ ವ್ಯಸನಗಳಿಗೆ ಯಾವುದೇ ಕಾರಣಕ್ಕೂ ಮಾರುಹೋಗಬಾರದು ಎಂದು ಕರೆ ನೀಡಿದರು.
ಗೌರವವನ್ನು ಸಮಾಜಕ್ಕೆ ಅರ್ಪಿಸುವೆ
ಪೊಲೀಸ್ ಇಲಾಖೆಯ ರಾಜ್ಯಮಟ್ಟದ ಪುರಸ್ಕಾರಕ್ಕೆ ಭಾಜನರಾಗಿರುವ ವಿಶ್ವನಾಥ ಬಡಿಗೇರ ಅವರಿಗೆ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ನೆರವೇರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವನಾಥ ಬಡಿಗೇರ, ಪೊಲೀಸ್ ಇಲಾಖೆ ನೀಡಿರುವ ಗೌರವವನ್ನು ಸಮಾಜಕ್ಕೆ ಅರ್ಪಿಸುವುದಾಗಿ ಹೇಳಿದರು. ಸಮಾಜದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಿದಾಗ, ಅದು ಇತರರಿಗೂ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಸಮಾಜದ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿರುವುದು ತಮ್ಮಲ್ಲಿ ಧನ್ಯತೆಯ ಭಾವ ಮೂಡಿಸಿದೆ ಎಂದು ಹೇಳಿದರು.
ಭಕ್ತಿ, ಶ್ರದ್ಧೆಯಿಂದ ಜಾತ್ರಾಮಹೋತ್ಸವ
ವರವಿ ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಮೋಹನ ಸಿ. ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ನಾಡಿನ ವಿವಿಧ ಮಠಾಧಿಪತಿಗಳು, ಪೀಠಾಧಿಪತಿಗಳು ಹಾಗೂ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ, ಸಮಸ್ತ ಭಕ್ತರ ಉಪಸ್ಥಿತಿಯಲ್ಲಿ ಜಾತ್ರಾಮಹೋತ್ಸವವು ಶ್ರದ್ಧೆ ಮತ್ತು ಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.
ಜಾತ್ರಾಮಹೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಭಕ್ತರು, ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಜಗದ್ಗುರು ಮೌನೇಶ್ವರರು ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ, ಚಿಕ್ಕಮಗಳೂರು ರೈತ ಸೇನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಗದಗ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಹ. ಬಡಿಗೇರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಠಾಧೀಶರ ಸಾನ್ನಿಧ್ಯ
ವಿಜಯಪುರ ಮೂರುಜಾವಧೀಶ್ವರ ಮಠದ ಶ್ರೀ ಮಹೇಂದ್ರ ಮಹಾಸ್ವಾಮೀಜಿ, ಲೇಬಗಿರಿ ಲಕ್ಷ್ಮೇಂದ್ರಸ್ವಾಮಿಗಳ ಮಠದ ಶ್ರೀ ನಾಗಮೂತೇಂದ್ರ ಮಹಾಸ್ವಾಮೀಜಿ ಹಾಗೂ ಹುಬ್ಬಳ್ಳಿಯ ವೇ.ಬ್ರ. ಶ್ರೀ ಶಂಕರಾಚಾರ್ಯ ಗು. ಕಡ್ಲಾಸ್ಕರ ಅವರು ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡ ಮುತ್ತಣ್ಣ ಬಡಿಗೇರ ಉಪಸ್ಥಿತರಿದ್ದರು.
ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ವ್ಹಿ.ಎಂ. ಕೊಟ್ರೆಶ್ ಆಚಾರ್, ಕೋಶಾಧ್ಯಕ್ಷ ನಿರಂಜನ ಎನ್. ಬಡಿಗೇರ, ಕಾರ್ಯದರ್ಶಿ ಮಹೇಶ ಎಸ್. ಹುಲಬಜಾರ, ಸದಸ್ಯರಾದ ಚಂದ್ರಕಾಂತ ಎಸ್. ಸೋನಾರ, ಈರಪ್ಪ ಎಂ. ಬಡಿಗೇರ, ಮೌನೇಶ ಸಿ. ಬಡಿಗೇರ, ನಾರಾಯಣ ಕೆ. ಸಿಂಗಟಾಲೂರ, ವಿಠ್ಠಲ ಎಸ್. ಸವದಿ, ಸೋಮಲಿಂಗಯ್ಯ ಡಿ. ವಡೆಯರ, ಶ್ರೀಧರ ಎಸ್. ಕೊಣ್ಣೂರ, ಅಶೋಕ ಎಂ. ಸೊರಟೂರ, ಡಿ.ಹೆಚ್. ಚಿದಾನಂದ, ವೀರಪ್ಪ ಸಿ. ಪತ್ತಾರ, ಪ್ರಚಾರ ಸಮಿತಿ ಅಧ್ಯಕ್ಷ ಮೌನೇಶ ಸಿ. ಬಡಿಗೇರ (ನರೇಗಲ್ಲ), ಮುಖ್ಯ ಶಿಕ್ಷಕ ಎಸ್.ಎಂ. ಬಡಿಗೇರ, ಮುಖಂಡರಾದ ಗೋಪಾಲ ಬಡಿಗೇರ, ಕಿರಣ ವಡ್ಡಟ್ಟಿ ಸೇರಿದಂತೆ ಸಮಾಜದ ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಶಿಕ್ಷಕ ಸತೀಶ ಹೊರಪೇಟೆ ಪ್ರಾರ್ಥಿಸಿದರು. ಮೋಹನ ಸಿ. ನರಗುಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ವಿಶ್ವನಾಥ ಯ. ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಸೋನಾರ ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP