
ಬಾಗಲಕೋಟೆ, 07 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸ್ವಸ್ಥ ಹಾಗೂ ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರು ಮತ್ತು ಪೊಲೀಸರು ತಮ್ಮದೇ ಆದ ಮಹತ್ವದ ಪಾತ್ರ ವಹಿಸುತ್ತಿದ್ದು, ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಬಾಗಲಕೋಟೆ ಜಿಲ್ಲೆಯ
ಮುಧೋಳ ನಗರ ಸಿಪಿಐ ಎಂ. ನಾಗರೆಡ್ಡಿ ಹೇಳಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿನ ಆಗುಹೋಗುಗಳನ್ನು ಜನಸಾಮಾನ್ಯರ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದೇ ರೀತಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ಜನರ ಸುರಕ್ಷತೆಗೆ ಪೊಲೀಸರು ನಿರಂತರವಾಗಿ ಶ್ರಮಿಸುತ್ತಾರೆ. ಹೀಗಾಗಿ ಸಮಾಜದ ಹಿತದೃಷ್ಟಿಯಿಂದ ಪತ್ರಕರ್ತರು ಮತ್ತು ಪೊಲೀಸ್ ಇಲಾಖೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅಗತ್ಯ ಎಂದರು.
ಮುಧೋಳದ ಪತ್ರಿಕಾ ಮಿತ್ರರು ಆಡಳಿತ ವರ್ಗ ಹಾಗೂ ಅಧಿಕಾರಿಗಳೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳುವ ಮೂಲಕ ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ತಮ್ಮ ಗಮನಕ್ಕೆ ಬರುವ ಲೋಪದೋಷಗಳು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ಸೂಕ್ಷ್ಮವಾಗಿ ತರುವ ಅವರ ಕಾರ್ಯಶೈಲಿ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ಹಾಗೂ ಪತ್ರಕರ್ತರ ನಡುವೆ ಭಿನ್ನಾಭಿಪ್ರಾಯ ಮತ್ತು ತಿಕ್ಕಾಟಗಳು ಕಂಡುಬರುತ್ತವೆ. ಆದರೆ ಮುಧೋಳದಲ್ಲಿ ಅಂತಹ ವಾತಾವರಣ ಇಲ್ಲ. ಇಲ್ಲಿನ ಪತ್ರಕರ್ತರು ವಸ್ತುನಿಷ್ಠವಾಗಿ ವಿಷಯಗಳನ್ನು ಗಮನಿಸಿ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ನಾಗರೆಡ್ಡಿ ಹೇಳಿದರು.
ಮುಧೋಳ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಕಂಡುಬರುವ ಕೆಲವು ಸಮಸ್ಯೆಗಳು ಹಾಗೂ ಸಾರ್ವಜನಿಕ ವಿಚಾರಗಳನ್ನು ಪತ್ರಕರ್ತ ಮಿತ್ರರು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಅಂತಹ ವಿಚಾರಗಳ ಕುರಿತು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ.
ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ವಿಷಯಗಳ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂದರು.
ಪೊಲೀಸ್ ಇಲಾಖೆಯ ಕಾರ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮದ ಸಹಕಾರ ಅಗತ್ಯ ಎಂದು ಹೇಳಿದ ಅವರು, ಪೊಲೀಸ್ ಇಲಾಖೆ ವತಿಯಿಂದ ಹಲವು ಜನಪರ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಕೆಲವೊಮ್ಮೆ ಸೂಕ್ತ ಪ್ರಚಾರದ ಕೊರತೆಯಿಂದಾಗಿ ಆ ಕಾರ್ಯಗಳ ಮಾಹಿತಿ ಸಾರ್ವಜನಿಕರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮತ್ತಷ್ಟು ಸಮನ್ವಯ ಸಾಧಿಸಿ, ಇಲಾಖೆಯ ಪ್ರಮುಖ ಕಾರ್ಯಗಳು, ಸಾರ್ವಜನಿಕರಿಗೆ ಲಭ್ಯವಿರುವ ಸೇವೆಗಳು ಹಾಗೂ ಕಾನೂನು ಅರಿವು ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ತಲುಪಿಸಲು ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.
ಪೊಲೀಸ್ ಇಲಾಖೆ ಮತ್ತು ಮಾಧ್ಯಮದ ನಡುವಿನ ಉತ್ತಮ ಬಾಂಧವ್ಯವು ಸಮಾಜದ ಹಿತಕ್ಕೆ ಪೂರಕವಾಗಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು, ಕಾನೂನು ಅರಿವು ಮೂಡಿಸುವುದು ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಕ್ಷೇತ್ರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪಿಎಸ್ಐ ಶಿವಾನಂದ ಕಾರಜೋಳ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಿ. ರತ್ನಾಕರಶೆಟ್ಟಿ ಮಾತನಾಡಿದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಅಶೋಕ ಕುಲಕರ್ಣಿ, ಉಪಾಧ್ಯಕ್ಷ ವಿಶ್ವನಾಥ ಮುನವಳ್ಳಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಚ್. ನದಾಫ್, ಖಜಾಂಚಿ ಗಣೇಶ ಮೇತ್ರಿ, ಸದಸ್ಯರಾದ ವೆಂಕಟೇಶ ಗುಡೆಪ್ಪನವರ, ಸಿದ್ದು ಹೂಗಾರ, ಪೀರಸಾಬ ನದಾಫ್, ಹಸನಡೋಂಗ್ರಿ ಮಹಾಲಿಂಗಪುರ, ಬಿ.ಎಚ್. ಬೀಳಗಿ, ಮಹಾಂತೇಶ ಕರೆಹೊನ್ನ, ಬಂದೇನವಾಜ ರಾಮದುರ್ಗ, ಜಗದೀಶ ಜೀರಗಾಳ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande