
ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸಲು ಶುಲ್ಕದಲ್ಲಿ ಶೇ.60ರಷ್ಟು ರಿಯಾಯಿತಿ ನೀಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಯೋಜನೆಗಳ ಮೇಲೆ ಬೆಂಗಳೂರಿನ ಜನರಿಗೆ ವಿಶ್ವಾಸವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.
ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಬೆಂಗಳೂರಿನಲ್ಲಿ ಅಂದಾಜು 7 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈವರೆಗೆ ಕೇವಲ 80,412 ಅರ್ಜಿಗಳು ಸ್ವೀಕೃತವಾಗಿವೆ. ಅಂದರೆ ಅಂದಾಜು ಫಲಾನುಭವಿಗಳಲ್ಲಿ ಶೇ.12ರಷ್ಟು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ, ದುಬಾರಿ ಶುಲ್ಕ, ಅರೆಬರೆ ನಿಯಮಗಳು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಕಾನೂನು ಸಂಕಷ್ಟಗಳ ಭಯದಿಂದ ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉತ್ತರ ಪಾಲಿಕೆ ವ್ಯಾಪ್ತಿಯಲ್ಲೇ ₹680 ಕೋಟಿ ಆದಾಯ ನಿರೀಕ್ಷಿಸಿದ್ದ ಸರ್ಕಾರಕ್ಕೆ ಕಡಿಮೆ ಅರ್ಜಿಗಳಿಂದ ನಿರಾಸೆಯಾಗಿದೆ. ರಿಯಾಯಿತಿ ನೀಡಿದರೂ ಜನರು ಯೋಜನೆಗೆ ಸ್ಪಂದಿಸದಿರುವುದು ಸರ್ಕಾರದ ಮೇಲಿನ ಜನರ ಅಪನಂಬಿಕೆಯನ್ನು ತೋರಿಸುತ್ತದೆ ಎಂದು ಆರ್. ಅಶೋಕ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.