ಸರ್ಕಾರಿ ವೃತ್ತಿಪರ ಶಿಕ್ಷಣ ಸೀಟುಗಳ ಗ್ರಾಮೀಣ ಮೀಸಲಾತಿಗೆ ತಿದ್ದುಪಡಿ: ಕರಡು ಅಧಿಸೂಚನೆ ಪ್ರಕಟ
ಕರಡು ಅಧಿಸೂಚನೆ ಪ್ರಕಟ
ಸರ್ಕಾರಿ ವೃತ್ತಿಪರ ಶಿಕ್ಷಣ ಸೀಟುಗಳ ಗ್ರಾಮೀಣ ಮೀಸಲಾತಿಗೆ ತಿದ್ದುಪಡಿ: ಕರಡು ಅಧಿಸೂಚನೆ ಪ್ರಕಟ


ಬೆಂಗಳೂರು, 07ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಭರ್ತಿಗೆ ಸಂಬಂಧಿಸಿದಂತೆ ಗ್ರಾಮೀಣ ಅಭ್ಯರ್ಥಿಗಳ ಮೀಸಲಾತಿ ನಿಯಮಾವಳಿಗೆ ಮಹತ್ವದ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

2006ರ 'ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳಿಗೆ ಅಭ್ಯರ್ಥಿಗಳ ಆಯ್ಕೆ ನಿಯಮಾವಳಿ'ಗೆ ತಿದ್ದುಪಡಿ ತರಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ನೀಡಲಾಗುವ ಒಟ್ಟು ಶೇಕಡಾ 15ರಷ್ಟು ಗ್ರಾಮೀಣ ಮೀಸಲಾತಿಯಲ್ಲಿ ಆಂತರಿಕ ವರ್ಗೀಕರಣ (ಹಾರಿಜಾಂಟಲ್ ಮೀಸಲಾತಿ) ಮಾಡಲು ಪ್ರಸ್ತಾಪಿಸಲಾಗಿದೆ.

ಕರಡು ತಿದ್ದುಪಡಿ ನಿಯಮಾವಳಿಯ ಪ್ರಮುಖಾಂಶಗಳುಹೊಸ ಕರಡು ನಿಯಮಾವಳಿಗಳ ಪ್ರಕಾರ, ಗ್ರಾಮೀಣ ಅಭ್ಯರ್ಥಿಗಳಿಗೆ ಲಭ್ಯವಿರುವ ಒಟ್ಟು ಶೇಕಡಾ 15ರಷ್ಟು ಸರ್ಕಾರಿ ಸೀಟುಗಳನ್ನು ಎರಡು ಭಾಗಗಳಾಗಿ ಶೇ. 7.5 ಮತ್ತು ಶೇ. 7.5ರಷ್ಟು ಹಾರಿಜಾಂಟಲ್ ಮೀಸಲಾತಿಯಾಗಿ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ.

ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ. 7.5 ಮೀಸಲಾತಿ: ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿರುವ, ಶಾಲಾ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಿರ್ವಹಿಸಲ್ಪಡುವ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ಶೇ. 7.5ರಷ್ಟು ಸೀಟುಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗುತ್ತದೆ.

ಇತರ ಗ್ರಾಮೀಣ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇ. 7.5 ಮೀಸಲಾತಿ:

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿರುವ ಇತರೆ ಶಿಕ್ಷಣ ಸಂಸ್ಥೆಗಳು ಅಥವಾ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ಉಳಿದ ಶೇ. 7.5ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ.

ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳಿಗೆ ಅವಕಾಶಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಸುನೀತಾ ಆರ್. ಬಿದಿರೆ ಅವರ ಹೆಸರಿನಲ್ಲಿ ಸೆಪ್ಟೆಂಬರ್ 5, 2026 ರಂದು ಈ ಕರಡು ಅಧಿಸೂಚನೆ ಹೊರಬಿದ್ದಿದೆ. ಈ ತಿದ್ದುಪಡಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಥವಾ ಯಾವುದೇ ವ್ಯಕ್ತಿಯಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳು ಇದ್ದಲ್ಲಿ, ಅಧಿಕೃತ ಗೆಜೆಟ್ನಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ಒಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಬಯಸುವವರು ತಮ್ಮ ಮನವಿಯನ್ನು 'ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಎಂ.ಎಸ್. ಬಿಲ್ಡಿಂಗ್, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು- 560 001' ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ನಿಗದಿತ ಕಾಲಮಿತಿಯ ನಂತರ ಬರುವ ಸಲಹೆಗಳನ್ನು ಪರಿಗಣಿಸಿ, ಅಂತಿಮ ನಿಯಮಾವಳಿಗಳನ್ನು ಗೆಜೆಟ್ನಲ್ಲಿ ಪ್ರಕಟಿಸಿದ ದಿನದಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande