ಪ್ರಾದೇಶಿಕ ಮಂಡಳಿ ಸಭೆಗಳಲ್ಲಿ ಜನಕಲ್ಯಾಣ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ: ಅಮಿತ್ ಶಾ
ನವದೆಹಲಿ, 07 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಪ್ರಾದೇಶಿಕ ಮಂಡಳಿಗಳು ಇನ್ನು ವಿವಾದಗಳ ಪರಿಹಾರಕ್ಕೆ ಮಾತ್ರ ಸೀಮಿತವಾಗದೆ, ಜನಕಲ್ಯಾಣ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯ ಪ್ರಮುಖ ವೇದಿಕೆಯಾಗಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು. ಗೋವಾದ ರಾಜಧಾನಿ ಪಣಜಿಯಲ್ಲಿ ಸೋಮವಾರ ನಡ
अमित शाह परिषद की बैठक लेते हुए


ನವದೆಹಲಿ, 07 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಪ್ರಾದೇಶಿಕ ಮಂಡಳಿಗಳು ಇನ್ನು ವಿವಾದಗಳ ಪರಿಹಾರಕ್ಕೆ ಮಾತ್ರ ಸೀಮಿತವಾಗದೆ, ಜನಕಲ್ಯಾಣ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯ ಪ್ರಮುಖ ವೇದಿಕೆಯಾಗಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ಗೋವಾದ ರಾಜಧಾನಿ ಪಣಜಿಯಲ್ಲಿ ಸೋಮವಾರ ನಡೆದ ಪಶ್ಚಿಮ ಪ್ರಾದೇಶಿಕ ಮಂಡಳಿಯ 28ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಶ್ಚಿಮ ವಲಯದ ರಾಜ್ಯಗಳ ನಡುವೆ ಇದೀಗ ಯಾವುದೇ ವಿವಾದ ಉಳಿದಿಲ್ಲ ಎಂಬುದು ಮಹತ್ವದ ಸಾಧನೆ ಎಂದು ಹೇಳಿದರು.

ಸಭೆಯಲ್ಲಿ ಚರ್ಚೆಯಾದ ಎಲ್ಲ ವಿಷಯಗಳು ಮೇಲ್ವಿಚಾರಣೆಗೆ ಸಂಬಂಧಿಸಿದ್ದವು. ರಾಜ್ಯಗಳ ನಡುವಿನ ಹಲವು ನದಿ ವಿವಾದಗಳನ್ನು ಪ್ರಾದೇಶಿಕ ಮಂಡಳಿಗಳ ಮೂಲಕ ಪರಿಹರಿಸಲಾಗಿದೆ. ಮಕ್ಕಳ ಅಪೌಷ್ಟಿಕತೆ, ಕಡಿಮೆ ತೂಕದ ಸಮಸ್ಯೆ, ಆಧಾರ್ ವ್ಯಾಪ್ತಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ಪರಿಣಾಮಕಾರಿ ಅನುಷ್ಠಾನದ ಮೇಲೂ ಮಂಡಳಿ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಹೊಸ ನ್ಯಾಯ ಸಂಹಿತೆಗಳ ಅನುಷ್ಠಾನ ಹಾಗೂ ಮಾದಕವಸ್ತುಗಳ ವಿರುದ್ಧದ ಹೋರಾಟವನ್ನು ಯಶಸ್ವಿಗೊಳಿಸುವಲ್ಲಿ ಪಶ್ಚಿಮ ವಲಯ ಮುಂಚೂಣಿ ಪಾತ್ರ ವಹಿಸಬೇಕು ಎಂದು ಅಮಿತ್ ಶಾ ಕರೆ ನೀಡಿದರು. ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳ ಗಣಕೀಕರಣದಲ್ಲೂ ಉತ್ತಮ ಪ್ರಗತಿಯಾಗಿದೆ. ಮಹಾರಾಷ್ಟ್ರದಲ್ಲಿ ಶೇ.98 ಹಾಗೂ ಗುಜರಾತ್‌ನಲ್ಲಿ ಶೇ.92ರಷ್ಟು ಗಣಕೀಕರಣ ಪೂರ್ಣಗೊಂಡಿದೆ ಎಂದರು.

ಬನಾಸ್ ಡೇರಿ ರೂಪಿಸಿರುವ ಗೋಬರ್ಧನ್ ಮಾದರಿಯನ್ನು ಇತರ ರಾಜ್ಯಗಳೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸೈಬರ್ ಅಪರಾಧಗಳ ವಿರುದ್ಧದ ಕಾರ್ಯತಂತ್ರವನ್ನು ‘ಪ್ರಗತಿ’ ವೇದಿಕೆಯಲ್ಲಿ ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಎಲ್ಲ ನಗರ ಸಹಕಾರಿ ಬ್ಯಾಂಕ್‌ಗಳು ಹಣಕಾಸು ಸೈಬರ್ ವಂಚನೆ ವರದಿ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗೆ ಸಂಪರ್ಕ ಹೊಂದಬೇಕು. ಸಹಕಾರಿ ಬ್ಯಾಂಕ್‌ಗಳನ್ನು ‘ಮ್ಯೂಲ್ ಹಂಟರ್’ ಕೃತಕ ಬುದ್ಧಿಮತ್ತೆ ವ್ಯವಸ್ಥೆಯೊಂದಿಗೆ ಸಂಯೋಜಿಸಲು ಉತ್ತೇಜಿಸಬೇಕು ಹಾಗೂ ಎಲ್ಲ ಸಹಕಾರಿ ಬ್ಯಾಂಕ್‌ಗಳು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದೊಂದಿಗೆ ಸಂಪರ್ಕ ಸಾಧಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮುಂದಿನ ಎರಡು ವರ್ಷಗಳಲ್ಲಿ ಕರಾವಳಿ ಭದ್ರತೆ ಬಲಪಡಿಸಲು ಗೃಹ ಸಚಿವಾಲಯ ಗಂಭೀರವಾಗಿ ಕ್ರಮ ಕೈಗೊಳ್ಳಲಿದೆ ಎಂದು ಅಮಿತ್ ಶಾ ತಿಳಿಸಿದರು.

ಹಸಿರು ಇಂಧನ ಕ್ಷೇತ್ರದಲ್ಲೂ ಪಶ್ಚಿಮ ವಲಯದ ರಾಜ್ಯಗಳು ದೇಶವನ್ನು ಮುನ್ನಡೆಸುತ್ತಿವೆ. ದತ್ತಾಂಶ ಕೇಂದ್ರಗಳಿಗಾಗಿ ಕೇಂದ್ರ ಸರ್ಕಾರ ಆಕರ್ಷಕ ನೀತಿ ರೂಪಿಸಿದ್ದು, ರಾಜ್ಯಗಳು ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪಶ್ಚಿಮ ವಲಯವು ದೇಶದ ಪ್ರಮುಖ ಆರ್ಥಿಕ, ಕೈಗಾರಿಕಾ ಹಾಗೂ ಹಣಕಾಸು ಕೇಂದ್ರವಾಗಿದೆ. ಪ್ರವಾಸೋದ್ಯಮ, ಹೆಚ್ಚಿನ ತಲಾ ಆದಾಯ ಮತ್ತು ಗಣಿಗಾರಿಕೆಯಿಂದ ಗೋವಾ ತನ್ನ ಭೌಗೋಳಿಕ ಸ್ಥಾನಕ್ಕಿಂತ ಹೆಚ್ಚಿನ ಆರ್ಥಿಕ ಕೊಡುಗೆ ನೀಡುತ್ತಿದೆ ಎಂದರು.

ಗೋವಾಕ್ಕೆ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಅವರಲ್ಲಿ ಸುಮಾರು ಐದು ಲಕ್ಷ ಮಂದಿ ವಿದೇಶಿ ಪ್ರವಾಸಿಗರಾಗಿದ್ದಾರೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಪ್ರವಾಸೋದ್ಯಮದ ಪಾಲು ಶೇ.16ರಷ್ಟಿದೆ ಎಂದು ಹೇಳಿದರು. ಮಹಾರಾಷ್ಟ್ರ 33,872 ನವೋದ್ಯಮಗಳೊಂದಿಗೆ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಧೋಲೆರಾ ಸೆಮಿಕಂಡಕ್ಟರ್ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಗುಜರಾತ್‌ನ ಮುಂದ್ರಾ ಬಂದರು ಅತಿ ಹೆಚ್ಚು ಸರಕು ನಿರ್ವಹಿಸುತ್ತಿದ್ದು, ದೀನದಯಾಳ್ ಬಂದರು ಸರಕು ಪ್ರಮಾಣದಲ್ಲಿ ಮುಂಚೂಣಿಯಲ್ಲಿದೆ. ದೇಶದ ಹಣಕಾಸು ರಾಜಧಾನಿ ಮುಂಬೈ ಜಾಗತಿಕ ಬಂಡವಾಳದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಪ್ರಾದೇಶಿಕ ಮಂಡಳಿಗಳ ಸಭೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2004ರಿಂದ 2014ರವರೆಗೆ ಪ್ರಾದೇಶಿಕ ಮಂಡಳಿಗಳು ಮತ್ತು ಅವುಗಳ ಸ್ಥಾಯಿ ಸಮಿತಿಗಳ ಒಟ್ಟು 25 ಸಭೆಗಳು ನಡೆದಿದ್ದರೆ, 2014ರಿಂದ ಇದುವರೆಗೆ 71 ಸಭೆಗಳು ನಡೆದಿವೆ. ಇದು ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಅಮಿತ್ ಶಾ ವಿವರಿಸಿದರು.

ಈ ಸಭೆಗಳಲ್ಲಿ ಒಟ್ಟು 1,893 ವಿಷಯಗಳ ಕುರಿತು ಚರ್ಚೆಯಾಗಿದ್ದು, 1,445 ವಿಷಯಗಳನ್ನು ಪರಿಹರಿಸಲಾಗಿದೆ. ಇದು ಪ್ರಾದೇಶಿಕ ಮಂಡಳಿಗಳ ಕಾರ್ಯಕ್ಷಮತೆ ಮತ್ತು ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಚಿವಾಲಯಗಳು ಹಾಗೂ ಇಲಾಖೆಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದ್ದು, ಅಂತರ್‌ರಾಜ್ಯ ಮಂಡಳಿ ಕಾರ್ಯದರ್ಶಾಲಯವು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಆಡಳಿತಾಧಿಕಾರಿ ಪ್ರಫುಲ್ ಕೆ. ಪಟೇಲ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande