ಆಸ್ತಿ ವ್ಯಾಜ್ಯ ಬಗೆಹರಿಸುವಂತೆ ಆಗ್ರಹ: ಮೃತದೇಹವನ್ನೇ ತಹಶೀಲ್ದಾರ್ ಕಚೇರಿಗೆ ತಂದ ಇಬ್ಬರು ಪತ್ನಿಯರು
ಬಾಗಲಕೋಟೆ, 07 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಆಸ್ತಿ ವ್ಯಾಜ್ಯ ಬಗೆಹರಿಸುವಂತೆ ಒತ್ತಾಯಿಸಿ ಮೃತ ವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ಬದಲು ತಾಲೂಕು ಆಡಳಿತ ಕಚೇರಿಗೆ ತಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಅಚ್ಚರಿಯ ಘಟನೆಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ. ನಗರದ ಯಲ
ಆಸ್ತಿ


ಬಾಗಲಕೋಟೆ, 07 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಆಸ್ತಿ ವ್ಯಾಜ್ಯ ಬಗೆಹರಿಸುವಂತೆ ಒತ್ತಾಯಿಸಿ ಮೃತ ವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ಬದಲು ತಾಲೂಕು ಆಡಳಿತ ಕಚೇರಿಗೆ ತಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಅಚ್ಚರಿಯ ಘಟನೆಬಾಗಲಕೋಟೆ ಜಿಲ್ಲೆಯ

ಜಮಖಂಡಿ ನಗರದಲ್ಲಿ ನಡೆದಿದೆ.

ನಗರದ ಯಲ್ಲಪ್ಪ ವಾಗೆನ್ನವರ ಎಂಬುವವರು ಭಾನುವಾರ ರಾತ್ರಿ ಏಕಾಏಕಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಯಲ್ಲಪ್ಪ ಅವರು ಇಬ್ಬರು ಪತ್ನಿಯರನ್ನು ಹೊಂದಿದ್ದು, ಮೊದಲ ಪತ್ನಿಗೆ ಓರ್ವ ಪುತ್ರನಿದ್ದರೆ, ಎರಡನೇ ಪತ್ನಿಗೆ ಐವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಯಲ್ಲಪ್ಪ ಅವರ ಹೆಸರಿನಲ್ಲಿ ಜಮಖಂಡಿ–ಮುಧೋಳ ರಸ್ತೆಯಲ್ಲಿರುವ 2 ಎಕರೆ 17 ಗುಂಟೆ ಪಿತ್ರಾರ್ಜಿತ ಜಮೀನು ಇತ್ತು. ಈ ಜಮೀನನ್ನು ಯಲ್ಲಪ್ಪ ಅವರು ಸೆಪ್ಟೆಂಬರ್ 5, 2026ರಂದು ಮತ್ತೊಬ್ಬರಿಗೆ ಮಾರಾಟ ಮಾಡಿರುವುದು ಕುಟುಂಬಸ್ಥರಿಗೆ ತಿಳಿದುಬಂದಿದೆ. ಜಮೀನು ಪರಭಾರೆ ಮಾಡುವ ಸಂದರ್ಭದಲ್ಲಿ ಎರಡನೇ ಪತ್ನಿಯ ಇಬ್ಬರು ಗಂಡು ಮಕ್ಕಳು ಮಾತ್ರ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಮೊದಲ ಹಾಗೂ ಎರಡನೇ ಪತ್ನಿಯರು ಸೇರಿದಂತೆ ಸಹಿ ಹಾಕದ ಕುಟುಂಬದ ಸದಸ್ಯರು, ತಮ್ಮ ಒಪ್ಪಿಗೆ ಇಲ್ಲದೆ ಪಿತ್ರಾರ್ಜಿತ ಜಮೀನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. “ನಾವು ಜಮೀನು ಮಾರಾಟಕ್ಕೆ ಒಪ್ಪಿಲ್ಲ. ನಮಗೆ ನಮ್ಮ ಜಮೀನು ಮರಳಿ ಕೊಡಿಸಬೇಕು” ಎಂದು ಆಗ್ರಹಿಸಿ ಮೃತ ಯಲ್ಲಪ್ಪ ಅವರ ಶವವನ್ನು ತಾಲೂಕು ಆಡಳಿತ ಕಚೇರಿ ಆವರಣಕ್ಕೆ ತಂದು ಪ್ರತಿಭಟನೆ ನಡೆಸಿದರು.

ಮೃತದೇಹವನ್ನು ಕಚೇರಿಗೆ ತಂದಿರುವ ವಿಷಯ ತಿಳಿದು ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬಸ್ಥರು ತಮ್ಮ ಆಸ್ತಿ ಸಮಸ್ಯೆ ಬಗೆಹರಿಯುವವರೆಗೂ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಈ ವೇಳೆ ಕುಟುಂಬಸ್ಥರೊಂದಿಗೆ ಮಾತನಾಡಿದ ತಹಶೀಲ್ದಾರ್ ಅನೀಲ ಬಡಿಗೇರ, ಜಮೀನು ಖರೀದಿ ಹಾಗೂ ಪರಭಾರೆಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಸಲು ಕಾನೂನುಬದ್ಧ ಅವಕಾಶವಿದೆ ಎಂದು ತಿಳಿಸಿದರು. ಕುಟುಂಬಸ್ಥರು ಸೂಕ್ತ ದಾಖಲೆಗಳೊಂದಿಗೆ ತಕರಾರು ಅರ್ಜಿ ಸಲ್ಲಿಸಿದಲ್ಲಿ ಪ್ರಕರಣವನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಆಸ್ತಿ ಖರೀದಿ/ಪರಭಾರೆ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್ ಅವರ ಭರವಸೆಯ ಬಳಿಕ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟು ಮೃತ ಯಲ್ಲಪ್ಪ ಅವರ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ದರು.

ಈ ಘಟನೆ ಜಮಖಂಡಿ ನಗರದಲ್ಲಿ ಸಾರ್ವಜನಿಕರ ಗಮನ ಸೆಳೆದಿದ್ದು, ಪಿತ್ರಾರ್ಜಿತ ಆಸ್ತಿ ಮಾರಾಟದ ವಿಚಾರ ಕುಟುಂಬದಲ್ಲಿ ಉಂಟುಮಾಡಿದ ವಿವಾದ ಕೊನೆಗೆ ಮೃತದೇಹವನ್ನು ಆಡಳಿತ ಕಚೇರಿಗೆ ತರುವ ಹಂತಕ್ಕೆ ತಲುಪಿರುವುದು ಚರ್ಚೆಗೆ ಕಾರಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande