
ಬಾಗಲಕೋಟೆ, 07 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಶ್ರಾವಣ ಮಾಸದ ಕೊನೆ ಸೋಮವಾರದ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಐತಿಹಾಸಿಕ ಮಹಾಕೂಟೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಮಹಾಕೂಟೇಶ್ವರ ದೇವಸ್ಥಾನದ ಪವಿತ್ರ ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ಮಹಾಕೂಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಶ್ರಾವಣ ಮಾಸದ ಸೋಮವಾರಗಳು ಶಿವಭಕ್ತರಿಗೆ ಅತ್ಯಂತ ವಿಶೇಷವಾಗಿದ್ದು, ಕೊನೆಯ ಸೋಮವಾರದಂದು ಮಹಾಕೂಟಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಮುಂಜಾನೆಯಿಂದಲೇ ದೇವಸ್ಥಾನದ ಸುತ್ತಮುತ್ತ ಭಕ್ತರ ಸಂಚಾರ ಹೆಚ್ಚಾಗಿತ್ತು. ಪುಷ್ಕರಣಿಯಲ್ಲಿ ಸ್ನಾನ ಮಾಡಿ, ಶಿವನ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಪವಿತ್ರ ಸ್ನಾನ ನೆರವೇರಿಸಿದರು.
ಪುಷ್ಕರಣಿಯಲ್ಲಿ ಮಿಂದೆದ್ದು ಮಾತನಾಡಿದ ಭಕ್ತ ಭಟ್ಕಳ ರಾಮಚಂದ್ರ, “ಮಹಾಕೂಟೇಶ್ವರ ಪುಷ್ಕರಣಿಯಲ್ಲಿ ಸ್ನಾನ ಮಾಡುವುದು ನಮ್ಮ ಪಾಲಿಗೆ ಅತ್ಯಂತ ಪುಣ್ಯದ ಕಾರ್ಯ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿ ಬಂದು ಪುಣ್ಯಸ್ನಾನ ಮಾಡಿ ಮಹಾಕೂಟೇಶ್ವರ ಸ್ವಾಮಿಯ ದರ್ಶನ ಪಡೆದಿರುವುದು ಮನಸ್ಸಿಗೆ ಅಪಾರ ಸಂತೋಷ ನೀಡಿದೆ. ಇದು ಭಕ್ತಿಯ ಪ್ರತೀಕವಾಗಿದ್ದು, ದೇವರ ಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಹೇಳಿದರು.
ಭಕ್ತರು ಪುಷ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡಿ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಶ್ರಾವಣ ಮಾಸದ ಕೊನೆಯ ಸೋಮವಾರವಾಗಿದ್ದರಿಂದ ದೇವಸ್ಥಾನದಲ್ಲಿ ಧಾರ್ಮಿಕ ವಾತಾವರಣ ಮತ್ತಷ್ಟು ಗರಿಗೆದರಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು, ತಮ್ಮ ಕುಟುಂಬದ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಮಹಾಕೂಟದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದಿಂದಾಗಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪವಿತ್ರ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಮಹಾಕೂಟೇಶ್ವರನ ದರ್ಶನ ಪಡೆಯುವುದು ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande