
ನವದೆಹಲಿ, 07 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಮೂರು ಸೇನೆಗಳಿಗಾಗಿ ಸುಮಾರು 1.10 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳ ಖರೀದಿ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಅನುಮೋದನೆಗೊಂಡ ಖರೀದಿಗಳ ಪೈಕಿ ಸುಮಾರು ಶೇ.98ರಷ್ಟು ಸಾಮಗ್ರಿಗಳನ್ನು ಭಾರತೀಯ ಉದ್ಯಮಗಳಿಂದಲೇ ಖರೀದಿಸಲು ನಿರ್ಧರಿಸಲಾಗಿದೆ. ಇದರಿಂದ ದೇಶೀಯ ರಕ್ಷಣಾ ಉತ್ಪಾದನೆಗೆ ಉತ್ತೇಜನ ದೊರೆಯುವುದರ ಜೊತೆಗೆ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವೂ ಮತ್ತಷ್ಟು ಬಲಪಡಲಿದೆ.
ಭಾರತೀಯ ಸೇನೆಗಾಗಿ ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಅಣು ದಾಳಿ ಪತ್ತೆ ವಾಹನಗಳು, ಹೆಚ್ಚಿನ ಚಲನಶೀಲತೆಯ ವಾಹನಗಳು, ಸ್ವಯಂಚಾಲಿತ ಯಾಂತ್ರಿಕ ನೆಲಬಾಂಬ್ ಅಳವಡಿಕೆ ವಾಹನಗಳು, ಸುಧಾರಿತ ಲಘು ಹೆಲಿಕಾಪ್ಟರ್‌ಗಳು, ಟ್ರಾಲ್ ಟ್ಯಾಂಕ್‌ಗಳು ಹಾಗೂ ಸರ್ವತ್ರ ಸೇತುವೆ ವ್ಯವಸ್ಥೆ ಖರೀದಿಗೆ ಅನುಮೋದನೆ ನೀಡಲಾಗಿದೆ.
ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಅಣು ಪತ್ತೆ ವಾಹನಗಳು ಅಪಾಯಕಾರಿ ಪ್ರದೇಶಗಳನ್ನು ಪತ್ತೆಹಚ್ಚಿ, ಗುರುತಿಸಿ, ಮೇಲ್ವಿಚಾರಣೆ ನಡೆಸಿ ಗುರುತು ಹಾಕುವ ಸಾಮರ್ಥ್ಯ ಹೊಂದಿರಲಿವೆ. ಹೆಚ್ಚಿನ ಚಲನಶೀಲತೆಯ ವಾಹನಗಳು ಕಠಿಣ ಭೌಗೋಳಿಕ ಪ್ರದೇಶಗಳಲ್ಲಿ ಕಾರ್ಯಾಚರಣೆ, ಸರಕು ಸಾಗಣೆ ಹಾಗೂ ಸೇನಾ ಚಲನವಲನಕ್ಕೆ ನೆರವಾಗಲಿವೆ. ಸ್ವಯಂಚಾಲಿತ ಯಾಂತ್ರಿಕ ನೆಲಬಾಂಬ್ ಅಳವಡಿಕೆ ವಾಹನಗಳು ಕಷ್ಟಕರ ಪ್ರದೇಶಗಳಲ್ಲಿ ವೇಗವಾಗಿ ನೆಲಬಾಂಬ್‌ಗಳನ್ನು ಅಳವಡಿಸುವ ಕಾರ್ಯಾಚರಣಾ ಸಾಮರ್ಥ್ಯ ಒದಗಿಸಲಿವೆ.
ಭಾರತೀಯ ಸೇನೆ ಮತ್ತು ವಾಯುಪಡೆಗಾಗಿ ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ಖರೀದಿಸಲಾಗುವುದು. ವಿವಿಧ ಭೌಗೋಳಿಕ ಪ್ರದೇಶಗಳು ಹಾಗೂ ಕಾರ್ಯಾಚರಣಾ ಪರಿಸ್ಥಿತಿಗಳಲ್ಲಿ ಕಠಿಣ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಇವು ನೆರವಾಗಲಿವೆ. ಟ್ರಾಲ್ ಟ್ಯಾಂಕ್‌ಗಳು ಮತ್ತು ಸೇತುವೆ ವ್ಯವಸ್ಥೆಯನ್ನು ವಿವಿಧ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆ ವೇಳೆ ನದಿ, ಕಾಲುವೆ ಸೇರಿದಂತೆ ಅಡೆತಡೆಗಳನ್ನು ದಾಟಲು ಬಳಸಲಾಗುವುದು.
ನೌಕಾಪಡೆಗಾಗಿ ಅರೋಧ್ರ ರೇಡಾರ್ ವಿನ್ಯಾಸ ಮತ್ತು ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ವಿವಿಧ ನೌಕಾ ವಾಯುನೆಲೆಗಳಲ್ಲಿ ಪ್ರಸ್ತುತ ಬಳಕೆಯಲ್ಲಿರುವ ವಾಯು ಮಾರ್ಗ ಮೇಲ್ವಿಚಾರಣಾ ರೇಡಾರ್‌ಗಳ ಬದಲಿಗೆ ಅರೋಧ್ರ ರೇಡಾರ್‌ಗಳನ್ನು ಅಳವಡಿಸಲಾಗುವುದು. ಯುದ್ಧನೌಕೆಗಳ ಚಾಲನಾ ವ್ಯವಸ್ಥೆಗಾಗಿ ಸಾಗರ ಅನಿಲ ಟರ್ಬೈನ್‌ಗಳ ಖರೀದಿಗೂ ಅಗತ್ಯತೆಯ ಸ್ವೀಕೃತಿ ನೀಡಲಾಗಿದೆ. ಇದರಿಂದ ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.
ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಯುದ್ಧವಿಮಾನಗಳು, ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ಸಂಬಂಧಿಸಿದ ವಿವಿಧ ಖರೀದಿ ಪ್ರಸ್ತಾವನೆಗಳಿಗೂ ಅನುಮೋದನೆ ನೀಡಲಾಗಿದೆ.
ಇದರ ಜೊತೆಗೆ ನೆಲ ಆಧಾರಿತ ಬಹು-ಉದ್ದೇಶದ ಜಾಮರ್‌ಗಳ ಖರೀದಿ ಹಾಗೂ ರಕ್ಷಣಾ ಪಡೆಗಳ ಸುರಕ್ಷಿತ ಪ್ರವೇಶ ಕಾರ್ಡ್ ವ್ಯವಸ್ಥೆ ಅಳವಡಿಕೆಗೆ ಒಪ್ಪಿಗೆ ನೀಡಲಾಗಿದೆ. ಬಹು-ಉದ್ದೇಶದ ಜಾಮರ್‌ಗಳು ಶತ್ರುಗಳ ರೇಡಾರ್ ವ್ಯವಸ್ಥೆಗಳ ವಿರುದ್ಧ ಪರಿಣಾಮಕಾರಿ ಅಡ್ಡಿಪಡಿಸುವ ಸಾಮರ್ಥ್ಯ ಹೊಂದಿರಲಿವೆ.
ಸುರಕ್ಷಿತ ಪ್ರವೇಶ ಕಾರ್ಡ್ ವ್ಯವಸ್ಥೆಯ ಮೂಲಕ ಪ್ರಸ್ತುತ ಬಳಕೆಯಲ್ಲಿರುವ ಕಾಗದದ ಗುರುತಿನ ಚೀಟಿ, ಪಾಸ್ ಹಾಗೂ ಪರವಾನಗಿಗಳ ಬದಲಿಗೆ ಪರಸ್ಪರ ಕಾರ್ಯನಿರ್ವಹಿಸಬಲ್ಲ ರೇಡಿಯೊ ತರಂಗ ಆಧಾರಿತ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬರಲಿದೆ.
ರಕ್ಷಣಾ ಪಡೆಗಳ ವಿವಿಧ ಖರೀದಿ ಪ್ರಸ್ತಾವನೆಗಳಿಗೆ ಅಗತ್ಯತೆಯ ಸ್ವೀಕೃತಿ ಎಂಬ ಸೈದ್ಧಾಂತಿಕ ಆಡಳಿತಾತ್ಮಕ ಅನುಮೋದನೆ ದೊರೆತಿರುವುದರಿಂದ, ಮುಂದಿನ ಹಂತದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಈ ಕ್ರಮವು ದೇಶದ ರಕ್ಷಣಾ ಸಿದ್ಧತೆ ಹಾಗೂ ಆತ್ಮನಿರ್ಭರ ರಕ್ಷಣಾ ಉತ್ಪಾದನೆಗೆ ಮತ್ತಷ್ಟು ಬಲ ನೀಡಲಿದೆ
-----------
ಹಿಂದೂಸ್ತಾನ್ ಸಮಾಚಾರ್ / Rakesh.M.B.