
ನವದೆಹಲಿ, 07 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆ ಮುಂದುವರಿದಿದೆ. ಬ್ರೆಂಟ್ ಕಚ್ಚಾ ತೈಲದ ದರ ಸೋಮವಾರ ಪ್ರತಿ ಬ್ಯಾರೆಲ್‌ಗೆ 97 ಡಾಲರ್ ಗಡಿ ದಾಟಿದ್ದು, ಡಬ್ಲ್ಯುಟಿಐ ಕಚ್ಚಾ ತೈಲವೂ 92 ಡಾಲರ್‌ಗಿಂತ ಹೆಚ್ಚಿನ ದರದಲ್ಲಿ ವಹಿವಾಟು ನಡೆಸಿತು.
ಬೆಳಗ್ಗೆ 9.45ರ ವೇಳೆಗೆ ಬ್ರೆಂಟ್ ಕಚ್ಚಾ ತೈಲ ಶೇ.1.14ರಷ್ಟು ಏರಿಕೆಯಾಗಿ 97.38 ಡಾಲರ್‌ಗೆ ತಲುಪಿತ್ತು. ಡಬ್ಲ್ಯುಟಿಐ ಕಚ್ಚಾ ತೈಲ ಶೇ.1.11ರಷ್ಟು ಏರಿಕೆಯಾಗಿ 92.50 ಡಾಲರ್‌ಗೆ ವಹಿವಾಟು ನಡೆಸುತ್ತಿತ್ತು.
ಕಚ್ಚಾ ತೈಲದ ದರ ದೀರ್ಘಕಾಲ 80 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮುಂದುವರಿದರೆ, ಭಾರತ ಸೇರಿದಂತೆ ತೈಲ ಆಮದು ಅವಲಂಬಿತ ದೇಶಗಳ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಾಗಬಹುದು ಎಂದು ಟಿಎನ್‌ವಿ ಫೈನಾನ್ಶಿಯಲ್ ಸರ್ವಿಸಸ್‌ನ ಸಿಇಒ ತಾರಕೇಶ್ವರ ನಾಥ್ ವೈಷ್ಣವ್ ಹೇಳಿದ್ದಾರೆ.
ತೈಲ ದರ ಏರಿಕೆಯಿಂದ ಭಾರತದ ಚಾಲ್ತಿ ಖಾತೆ ಕೊರತೆ ಮತ್ತು ವಿತ್ತೀಯ ಕೊರತೆ ಹೆಚ್ಚಾಗುವ ಸಾಧ್ಯತೆಯಿದ್ದು, ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರ ಏರಿಕೆ ಹಾಗೂ ವಿದೇಶಿ ಬಂಡವಾಳದ ಹೊರಹರಿವಿಗೂ ಕಾರಣವಾಗಬಹುದು. ಇದರಿಂದ ಷೇರು ಮಾರುಕಟ್ಟೆಯಲ್ಲೂ ಅನಿಶ್ಚಿತತೆ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.