ಆರೋಗ್ಯಪೂರ್ಣ ಸಮಾಜ ನಿರ್ಮಾಣ ಅಗತ್ಯ: ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು
ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯವಾಗಿದ್ದು, ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಅಪೌಷ್ಟಿಕತೆ ನಿವಾರಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಲು ಶ್ರಮಿಸಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ
ಆರೋಗ್ಯಪೂರ್ಣ ಸಮಾಜ ನಿರ್ಮಾಣ ಅಗತ್ಯ - ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು


ಆರೋಗ್ಯಪೂರ್ಣ ಸಮಾಜ ನಿರ್ಮಾಣ ಅಗತ್ಯ - ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು


ಆರೋಗ್ಯಪೂರ್ಣ ಸಮಾಜ ನಿರ್ಮಾಣ ಅಗತ್ಯ - ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು


ಆರೋಗ್ಯಪೂರ್ಣ ಸಮಾಜ ನಿರ್ಮಾಣ ಅಗತ್ಯ - ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು


ಆರೋಗ್ಯಪೂರ್ಣ ಸಮಾಜ ನಿರ್ಮಾಣ ಅಗತ್ಯ - ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು


ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯವಾಗಿದ್ದು, ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಅಪೌಷ್ಟಿಕತೆ ನಿವಾರಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಲು ಶ್ರಮಿಸಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದಲಿಂಗ ಪ್ರಭು ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಪಂ ನ ಹಳೇ ನಜೀರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಪೋಷಣ್ ಮಾಸಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದೆ ರಾಜ್ಯಾದ್ಯಂತ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳನ್ನು ಗುರುತಿಸಿ, ಅದನ್ನು ಹೋಗಲಾಡಿಸಲು ರೂಪಿಸಿದ ಕಾರ್ಯಕ್ರಮಗಳ ಫಲವಾಗಿ ಇಂದು ಮಹತ್ತರ ಪ್ರಗತಿ ಸಾಧಿಸಲಾಗಿದೆ. ಈ ಅಭಿಯಾನದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪರಿಶ್ರಮ ಅಪಾರವಾಗಿದ್ದು, ಅವರ ಕ್ಷೇತ್ರ ಮಟ್ಟದ ಸೇವೆ ಶ್ಲಾಘನೀಯ ಎಂದು ಪ್ರಶಂಶಿಸಿದರು.

ಮಾನಸಿಕವಾಗಿ ಸದೃಢರಾದಾಗ ಮಾತ್ರ ಸರಿ-ತಪ್ಪುಗಳ ವಿವೇಚನೆ ಸಾಧ್ಯ. ಉತ್ತಮ ಆರೋಗ್ಯವಿದ್ದಲ್ಲಿ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಮೊಳಕೆ ಕಾಳುಗಳು ಮತ್ತು ವಿಟಮಿನ್ಯುಕ್ತ ಪೌಷ್ಟಿಕ ಆಹಾರಗಳ ಮಹತ್ವವನ್ನು ಜನರಿಗೆ ತಲುಪಿಸುವ ಅಗತ್ಯವಿದೆ. ಗರ್ಭಧಾರಣೆಯ ಮೊದಲ ದಿನದಿಂದ ಹಿಡಿದು ಮಗುವಿನ ಜನನದವರೆಗೂ ತಾಯಿ ಮತ್ತು ಮಗುವಿಗೆ ಸೂಕ್ತ ಪೋಷಕಾಂಶಯುಕ್ತ ಆಹಾರ ಒದಗಿಸುವುದು ಇಂದಿನ ತುರ್ತು ಅಗತ್ಯ ಎಂದು ತಿಳಿಸಿದರು.

ಅಪೌಷ್ಟಿಕತೆಯನ್ನು ಬೇರುಮಟ್ಟದಲ್ಲೇ ಚಿವುಟಿಹಾಕುವ ನಿಟ್ಟಿನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದು, ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮುಂದುವರಿಸಬೇಕಿದೆ. ಮುಂದಿನ ಪೀಳಿಗೆಯು ಅಪೌಷ್ಟಿಕತೆಯಿಂದ ನರಳದಂತೆ ಜಾಗೃತಿ ವಹಿಸಿ, ಆರೋಗ್ಯವಂತ ಸಮಾಜವನ್ನು ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಮಕ್ಕಳು ಮತ್ತು ತಾಯಂದಿರಲ್ಲಿ ಕಂಡುಬರುವ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ಬುಡಸಮೇತ ಕಿತ್ತೊಗೆಯಲು ಸಮತೋಲಿತ ಆಹಾರ ಪದ್ಧತಿ ಅತ್ಯಗತ್ಯ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜನರು ನಾಲಿಗೆಯ ರುಚಿಗೆ ನೀಡುವ ಮಹತ್ವವನ್ನು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿಗೆ ನೀಡುತ್ತಿಲ್ಲ. ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳ ಸಮತೋಲನವಿಲ್ಲದಿದ್ದರೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಎಚ್ಚರಿಸಿದರು.

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಬಿಎಂಸಿಆರ್ಸಿ ಆಸ್ಪತ್ರೆ ಸೇರಿದಂತೆ ತಾಲ್ಲೂಕು ಮಟ್ಟದಲ್ಲಿ ‘ಪೌಷ್ಟಿಕ ಪುನರ್ವಸತಿ ಕೇಂದ್ರ’ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ದಾಖಲಾಗುವ ಮಕ್ಕಳಿಗೆ 14 ದಿನಗಳ ಕಾಲ ಉಚಿತ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ನೀಡಲಾಗುತ್ತದೆ. ಜೊತೆಗೆ ಅವರ ಪಾಲಕರಿಗೆ ಕೂಲಿ ಭತ್ಯೆಯನ್ನೂ ಒದಗಿಸಲಾಗುತ್ತದೆ. ಇಂತಹ ಮಕ್ಕಳನ್ನು ಎನ್ಆರ್ಸಿ ಕೇಂದ್ರಕ್ಕೆ ಕರೆತರುವ ಆಶಾ ಕಾರ್ಯಕರ್ತೆಯರಿಗೆ ರೂ.300 ಪ್ರೋತ್ಸಾಹಧನ ನೀಡುವ ವ್ಯವಸ್ಥೆಯಿದೆ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸಂಘಗಳು ಮನೆ ಮನೆಗೆ ತೆರಳಿ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ ಮಾಡಲಾಯಿತು.

ಇದಕ್ಕೂ ಮುನ್ನ, ಜಿಲ್ಲಾ ಮಟ್ಟದ ಪೋಷಣ್ ಮಾಸಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಪೌಷ್ಟಿಕ ಆಹಾರ ಮೇಳವನ್ನು ಗಣ್ಯರು ವೀಕ್ಷಣೆ ಮಾಡಿದರು. ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿ ಸಿರಿಧಾನ್ಯ ಖಾದ್ಯಗಳು, ಮೊಳಕೆ ಕಾಳುಗಳು, ತರಕಾರಿ-ಸೊಪ್ಪು ಕಂಡುಬ0ದವು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ದೇವರಾಜ್, ಬಳ್ಳಾರಿ ನಗರ ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಂದಿನಿ ಶಿಂಧೆ, ಬಳ್ಳಾರಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಕ ಈಶ್ವರ್ ಹಾಗೂ ಚನ್ನಬಸಪ್ಪ ಪಾಟೀಲ್ ಸೇರಿದಂತೆ ಅಂಗನವಾಡಿ ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande