


ಕಂಪ್ಲಿ, 07 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ :
ಭಾರತದ ಯುವಜನತೆಯನ್ನು ಉತ್ತಮ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದೊಂದಿಗೆ ಸಜ್ಜುಗೊಳಿಸಿದರೆ ಯುವಶಕ್ತಿಯೇ ದೇಶದ ಅತಿದೊಡ್ಡ ಆಸ್ತಿಯಾಗಲಿದೆ. ಆದರೆ ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಲು ವಿಫಲವಾದರೆ ಜನಸಂಖ್ಯಾ ಲಾಭಾಂಶವೇ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಯುವಜನತೆ, ಉದ್ಯೋಗ, ಶಿಕ್ಷಣ, ಕೆಪಿಎಸ್‌ಸಿ ಸುಧಾರಣೆ, ಕೃತಕ ಬುದ್ಧಿಮತ್ತೆ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಬಳ್ಳಾರಿ ಪಾದಯಾತ್ರೆ ಮಧ್ಯೆ ಕಂಪ್ಲಿಯಲ್ಲಿ ಯುವಕರೊಂದಿಗೆ ನಡೆದ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸುಮಾರು ಶೇ.65ರಷ್ಟಿದ್ದಾರೆ. 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರನ್ನು ಕೇವಲ ಉದ್ಯೋಗ ಹುಡುಕುವವರನ್ನಾಗಿ ಮಾಡುವ ಬದಲು ಉದ್ಯೋಗ ಸೃಷ್ಟಿಸುವ ಉದ್ಯಮಿಗಳು ಮತ್ತು ಉದ್ಯೋಗದಾತರನ್ನಾಗಿ ರೂಪಿಸಬೇಕು ಎಂದರು.
ಕೆಪಿಎಸ್‌ಸಿಗೆ ಹೊಸ ಕಾಯಕಲ್ಪ ಅಗತ್ಯ: ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಸೂಚನೆ, ಪರೀಕ್ಷೆ, ಫಲಿತಾಂಶ ಮತ್ತು ಸಂದರ್ಶನ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ವರ್ಷಗಳ ವಿಳಂಬವಾಗುತ್ತಿದೆ. ನಾಲ್ಕೈದು ವರ್ಷ ತರಬೇತಿ ಪಡೆದು ನೇಮಕಾತಿಗಾಗಿ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದರು.
ಕೆಪಿಎಸ್‌ಸಿ ಸ್ವಾಯತ್ತ ಸಂಸ್ಥೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿಯಬಾರದು. ನೇಮಕಾತಿ ವಿಳಂಬದಿಂದ ಸಂಸ್ಥೆಯ ಮೇಲಿನ ವಿಶ್ವಾಸ ಕುಗ್ಗಿದ್ದು, ಕೆಪಿಎಸ್‌ಸಿಗೆ ಹೊಸ ಕಾಯಕಲ್ಪ ನೀಡಬೇಕಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕೆಪಿಎಸ್‌ಸಿ ಸುಧಾರಣೆ ಹಾಗೂ ಸರ್ಕಾರಿ ನೇಮಕಾತಿ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡುವುದು ಪ್ರಮುಖ ಆದ್ಯತೆಯಾಗಲಿದೆ ಎಂದು ಭರವಸೆ ನೀಡಿದರು.
ಸರ್ಕಾರಿ ಶಾಲೆಗಳಿಗೆ ಪುನಶ್ಚೇತನ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಉತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಕರು ಮತ್ತು ಪರಿಣಾಮಕಾರಿ ಶಾಲಾ ನಾಯಕತ್ವ ಒದಗಿಸಬೇಕು. ಶಿಕ್ಷಕರ ಬದ್ಧತೆ ಹಾಗೂ ಉತ್ತಮ ನಾಯಕತ್ವದಿಂದ ಸರ್ಕಾರಿ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಫಲಿತಾಂಶವನ್ನು ಹೆಚ್ಚಿಸಬಹುದು ಎಂದರು.
ಶಿಕಾರಿಪುರದ ಸರ್ಕಾರಿ ಶಾಲೆಯೊಂದರಲ್ಲಿ ಎರಡು ವರ್ಷಗಳ ಹಿಂದೆ ಕೇವಲ 25 ವಿದ್ಯಾರ್ಥಿಗಳಿದ್ದರೂ ಉತ್ತಮ ಪ್ರಾಂಶುಪಾಲರು ಮತ್ತು ಶಿಕ್ಷಕರ ನೇಮಕದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ 250ಕ್ಕೂ ಹೆಚ್ಚಾದ ಉದಾಹರಣೆಯನ್ನು ನೀಡಿದ ಅವರು, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರ ವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯವಿದೆ ಎಂದರು.
ಗ್ರಾಮೀಣ ಮಕ್ಕಳಿಗೆ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ತಪ್ಪಿಸಲು ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯವನ್ನು ಮನೆಬಾಗಿಲಲ್ಲೇ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ: ಬೆಂಗಳೂರು ಅಭಿವೃದ್ಧಿಯನ್ನೇ ಕರ್ನಾಟಕದ ಅಭಿವೃದ್ಧಿ ಎಂದು ಪರಿಗಣಿಸುವ ಮನೋಭಾವ ಬದಲಾಗಬೇಕು. ರಾಜ್ಯದ ಪ್ರತಿಯೊಂದು ಭಾಗವೂ ಸಮಾನವಾಗಿ ಅಭಿವೃದ್ಧಿಯಾದಾಗ ಮಾತ್ರ ಸಮಗ್ರ ಕರ್ನಾಟಕ ನಿರ್ಮಾಣ ಸಾಧ್ಯ ಎಂದು ವಿಜಯೇಂದ್ರ ಹೇಳಿದರು.
ಕಲ್ಯಾಣ ಕರ್ನಾಟಕದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು 3–4 ಕಿ.ಮೀ. ನಡೆದು ಹೋಗುವ ಪರಿಸ್ಥಿತಿ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹಾಗೂ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇನ್ನೂ ಇದೆ. ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ಕಲಬುರಗಿ ಭಾಗಗಳಿಂದ ಯುವಕರ ವಲಸೆಗೆ ಶಿಕ್ಷಣ, ಕೈಗಾರಿಕೆ ಮತ್ತು ಉದ್ಯೋಗದ ಕೊರತೆಯೂ ಪ್ರಮುಖ ಕಾರಣವಾಗಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ಸಮರ್ಪಕ ಬಜೆಟ್, ನೀರಾವರಿ ಯೋಜನೆಗಳು, ಉತ್ತಮ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆಗಳು ಮತ್ತು ಕೈಗಾರಿಕೆಗಳನ್ನು ಒದಗಿಸಬೇಕು. ಅನುದಾನ ನೀಡುವುದಷ್ಟೇ ಸಾಲದು, ಅದರ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯೂ ಇರಬೇಕು ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯಿಂದ ಹೊಸ ಅವಕಾಶಗಳು: ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ತಂತ್ರಜ್ಞಾನದಿಂದ ಉದ್ಯೋಗಗಳು ಕಡಿಮೆಯಾಗುವ ಆತಂಕದ ಕುರಿತು ಯುವಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ತಂತ್ರಜ್ಞಾನ ಬದಲಾವಣೆ ಹೊಸ ಸವಾಲುಗಳ ಜೊತೆಗೆ ಹೊಸ ಅವಕಾಶಗಳನ್ನೂ ಸೃಷ್ಟಿಸುತ್ತದೆ ಎಂದರು.
1990ರ ದಶಕದಲ್ಲಿ ಕಂಪ್ಯೂಟರ್ ಬಂದಾಗಲೂ ಉದ್ಯೋಗ ನಷ್ಟದ ಭೀತಿ ಇತ್ತು. ಆದರೆ ನಂತರ ಹೊಸ ಉದ್ಯೋಗ ಕ್ಷೇತ್ರಗಳು ಸೃಷ್ಟಿಯಾದವು. ಕೃತಕ ಬುದ್ಧಿಮತ್ತೆ ಕೆಲವು ಸಾಂಪ್ರದಾಯಿಕ ಉದ್ಯೋಗಗಳನ್ನು ಬದಲಾಯಿಸಬಹುದು. ಅದೇ ವೇಳೆ ಹೊಸ ಉದ್ಯೋಗಗಳಿಗೂ ದಾರಿ ಮಾಡಿಕೊಡಲಿದೆ. ಆದ್ದರಿಂದ ಯುವಕರು ಭಯಪಡುವ ಬದಲು ಹೊಸ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ ಯೋಜನೆ ಮರುಜಾರಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ವಿಶೇಷವಾಗಿ ಹೆಣ್ಣುಮಕ್ಕಳು, ಶಾಲಾ-ಕಾಲೇಜುಗಳಿಗೆ ದೂರ ಪ್ರಯಾಣಿಸುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸೈಕಲ್ ಯೋಜನೆ ಮರುಜಾರಿಗೊಳಿಸುವಂತೆ ಯುವಕರು ನೀಡಿದ ಸಲಹೆಗೆ ವಿಜಯೇಂದ್ರ ಸ್ಪಂದಿಸಿದರು.
ಹಿಂದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್, ನೋಟ್‌ಬುಕ್ ಮತ್ತು ಬ್ಯಾಗ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಇಂತಹ ವಿದ್ಯಾರ್ಥಿ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಹೊರತಾಗಿಯೂ ಯುವಕರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಬಳ್ಳಾರಿ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಬೇಕು ಎಂದು ಹೇಳಿದರು.
ಕೇರಳದ ಪ್ರವಾಸೋದ್ಯಮ ಅಭಿವೃದ್ಧಿ ಮಾದರಿಯಿಂದ ಕರ್ನಾಟಕ ಪಾಠ ಕಲಿಯಬೇಕು. ಪ್ರವಾಸೋದ್ಯಮವನ್ನು ಒಂದೆರಡು ವರ್ಷಗಳ ಯೋಜನೆಯಾಗಿ ನೋಡದೆ 5, 10 ಅಥವಾ 15 ವರ್ಷಗಳ ದೀರ್ಘಕಾಲಿಕ ಯೋಜನೆಯಾಗಿ ರೂಪಿಸಬೇಕು. ಐತಿಹಾಸಿಕ ಸ್ಥಳಗಳಿಗೆ ಮೂಲಸೌಕರ್ಯ, ಪ್ರವಾಸಿಗರ ಸೌಲಭ್ಯ ಮತ್ತು ಜಾಗತಿಕ ಮಟ್ಟದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬಹುದು ಎಂದರು.
ಯುವಕರು ರಾಜಕೀಯಕ್ಕೂ ಬರಬೇಕು: ಯುವಕರಿಗೆ ತಾತ್ಕಾಲಿಕ ರಾಜಕೀಯ ಆಕರ್ಷಣೆಗಳಿಗಿಂತ ಜೀವನಪೂರ್ತಿ ಉಪಯೋಗವಾಗುವ ಶಿಕ್ಷಣ, ಕೌಶಲ್ಯ, ಉದ್ಯೋಗ ಮತ್ತು ಸ್ವಾಭಿಮಾನಿ ಬದುಕಿನ ಅವಕಾಶಗಳನ್ನು ಕಲ್ಪಿಸುವುದು ಮುಖ್ಯ. ರಾಜಕೀಯ ಕ್ಷೇತ್ರವು ಸಾಮಾಜಿಕ ಸೇವೆ ಮತ್ತು ವ್ಯವಸ್ಥಾತ್ಮಕ ಬದಲಾವಣೆಗೆ ಪರಿಣಾಮಕಾರಿ ವೇದಿಕೆಯಾಗಿದೆ. ಇಂಜಿನಿಯರ್, ವೈದ್ಯ, ಐಎಎಸ್, ಐಪಿಎಸ್ ಆಗುವ ಕನಸು ಕಾಣುವ ಯುವಕರು ರಾಜಕೀಯ ಕ್ಷೇತ್ರಕ್ಕೂ ಬರಬೇಕು ಎಂದು ವಿಜಯೇಂದ್ರ ಕರೆ ನೀಡಿದರು.
ಯುವಕರು ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ, ಹೋರಾಡುವ ಮತ್ತು ಬದಲಾವಣೆ ತರುವ ಯುವಶಕ್ತಿಯೇ ಅಭಿವೃದ್ಧಿ ಹೊಂದಿದ ಕರ್ನಾಟಕ ಹಾಗೂ ವಿಕಸಿತ ಭಾರತದ ನಿರ್ಮಾಣಕ್ಕೆ ಪ್ರಮುಖ ಶಕ್ತಿಯಾಗಲಿದೆ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್