ಪಿಓಪಿ ಗಣೇಶ ವಿಗ್ರಹಗಳ ಮಾರಾಟ ಮತ್ತು ತಯಾರಿಕೆ ವಿರುದ್ಧ ಕಾರ್ಯಾಚರಣೆ ತೀವ್ರ
1,283 ಮೂರ್ತಿಗಳು ಮುಟ್ಟುಗೋಲು
ಪಿಓಪಿ ಗಣೇಶ ವಿಗ್ರಹಗಳ ಮಾರಾಟ ಮತ್ತು ತಯಾರಿಕೆ ವಿರುದ್ಧ ಕಾರ್ಯಾಚರಣೆ ತೀವ್ರ


ಬೆಂಗಳೂರು, 06ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ರಾಜ್ಯದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ನಿರ್ದೇಶನದ ಮೇರೆಗೆ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ತೀವ್ರಗೊಂಡಿದೆ.

ಆಗಸ್ಟ್ 18, 2026 ರಿಂದ ಸೆಪ್ಟೆಂಬರ್ 06, 2026 ರವರೆಗೆ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಕಾರ್ಯಾಚರಣೆಗಾಗಿ ಪ್ರತಿ ಜಿಲ್ಲೆಯಲ್ಲೂ 4 ರಿಂದ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಅರಣ್ಯ ಇಲಾಖೆಯ ವಿಶೇಷ ಪಡೆಗಳೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು.

ಬೆಂಗಳೂರು ನಗರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಮಂಗಳೂರು, ಚಿಕ್ಕಮಂಗಳೂರು, ಕಾರವಾರ, ಉಡುಪಿ, ಬೆಳಗಾವಿ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ಸರ್ಕಾರದ ಮಾರ್ಗದರ್ಶನಗಳನ್ನು ಉಲ್ಲಂಘಿಸಿ ಪಿಓಪಿ ಮೂರ್ತಿಗಳನ್ನು ತಯಾರಿಸುತ್ತಿದ್ದ ಹಾಗೂ ಸಂಗ್ರಹಿಸಿದ್ದ ಒಟ್ಟು 214 ಮಳಿಗೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿವೀಕ್ಷಣೆ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯ ವೇಳೆ ನಿಯಮಬಹಿರವಾಗಿ ಸಂಗ್ರಹಿಸಲಾಗಿದ್ದ ಒಟ್ಟು 1,283 ಪಿಓಪಿ ಗಣೇಶ ಮೂರ್ತಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಕರ್ನಾಟಕ ಸರ್ಕಾರವು ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಸಾರ್ವಜನಿಕರಿಗೆ ಸಚಿವರ ಮನವಿಪರಿಸರ ಮತ್ತು ಜಲಚರಗಳ ಸಂರಕ್ಷಣೆಗಾಗಿ ಸಾರ್ವಜನಿಕರು ಕೇವಲ ಮಣ್ಣಿನ ಗಣೇಶ ಮೂರ್ತಿಗಳನ್ನೇ ಬಳಸಬೇಕು ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮನವಿ ಮಾಡಿದ್ದಾರೆ. ಜೈವಿಕವಾಗಿ ಕರಗುವ ಮಣ್ಣಿನ ಮೂರ್ತಿಗಳು ಜಲಮಾಲಿನ್ಯವನ್ನು ತಡೆಯುವುದರ ಜೊತೆಗೆ ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande