
ಮಂಡ್ಯ, 06 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯದ ಹೊರವಲಯದ ಇಂಡುವಾಳು ಬಳಿ ವರದಿಯಾಗಿದೆ. ಕಾರಿನಲ್ಲಿದ್ದ ಸನತ್ ಹಾಗೂ ಮತ್ತೊಬ್ಬರು ಸಮಯೋಜಿತವಾಗಿ ವರ್ತಿಸಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಘಟನೆಯ ವಿವರಗಳ ಪ್ರಕಾರ, KA 05 ME 7634 ನಂಬರಿನ ಈ ಕಾರು ಮೈಸೂರಿನಲ್ಲಿ ನೆಲೆಸಿರುವ ಸನತ್ ಎಂಬುವವರಿಗೆ ಸೇರಿದ್ದಾಗಿದೆ. ಸನತ್ ಹಾಗೂ ಅವರ ಜತೆಗೆ ಮತ್ತೊಬ್ಬರು ಬಟ್ಟೆ ವ್ಯಾಪಾರವನ್ನು ಮುಗಿಸಿಕೊಂಡು ಎಕ್ಸ್ಪ್ರೆಸ್ವೇ ಮೂಲಕ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ದಗೆ ಹೊಮ್ಮಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸನತ್ ಹಾಗೂ ಜತೆಗಿದ್ದ ವ್ಯಕ್ತಿ ಕಾರನ್ನು ನಿಲ್ಲಿಸಿ ಕೂಡಲೇ ಕೆಳಗೆ ಇಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆ ಇಡೀ ಕಾರಿಗೆ ವ್ಯಾಪಿಸಿ, ನೋಡನೋಡುತ್ತಿದ್ದಂತೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು. ಆದರೆ ಅಷ್ಟರಲ್ಲಾಗಲೇ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಶಾರ್ಟ್ ಸರ್ಕಿಟ್ ಬೆಂಕಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R