
ನವದೆಹಲಿ/ಪ್ಯಾರಿಸ್, 06 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನದ ಭಾರತೀಯ ಪೆವಿಲಿಯನ್‌ನಲ್ಲಿ ಆಯೋಜಿಸಿರುವ ‘ಹೂಜ್ ನೆಕ್ಸ್ಟ್’ ಪ್ರದರ್ಶನಕ್ಕೆ ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ನೀಲಂ ಶಮಿ ರಾವ್ ಚಾಲನೆ ನೀಡಿದರು.
ಭಾರತದ ಸಮೃದ್ಧ ಫ್ಯಾಷನ್, ಕೈಮಗ್ಗ, ಕರಕುಶಲ ಮತ್ತು ಜೀವನಶೈಲಿ ಉತ್ಪನ್ನಗಳ ಸಾಂಸ್ಕೃತಿಕ ವೈವಿಧ್ಯ ಹಾಗೂ ಜಾಗತಿಕ ಸಾಮರ್ಥ್ಯವನ್ನು ಪ್ರದರ್ಶನದಲ್ಲಿ ಪರಿಚಯಿಸಲಾಗಿದೆ. ಯುರೋಪ್‌ನ ಸ್ಥಳೀಯ ಮಾರುಕಟ್ಟೆಗಳಿಗೆ ಭಾರತೀಯ ಉತ್ಪನ್ನಗಳ ಪ್ರವೇಶ ಹೆಚ್ಚಿಸುವ ಉದ್ದೇಶದಿಂದ ನೀಲಂ ಶಮಿ ರಾವ್ ಅವರು ಡಬ್ಲ್ಯುಎಸ್‌ಎನ್‌ನ ಪ್ರಮುಖ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಈ ಜಾಗತಿಕ ವೇದಿಕೆಯಲ್ಲಿ 94 ಭಾರತೀಯ ಪ್ರದರ್ಶಕರು ಭಾಗವಹಿಸಿದ್ದು, ಅಂತರರಾಷ್ಟ್ರೀಯ ಖರೀದಿದಾರರು ಹಾಗೂ ಭಾರತೀಯ ಪ್ರದರ್ಶಕರ ನಡುವೆ ನೇರ ವ್ಯಾಪಾರ ಸಂಪರ್ಕ ಕಲ್ಪಿಸುವುದು, ಪರಿಸರ ಸ್ನೇಹಿ ಮತ್ತು ಸುಸ್ಥಿರ ಫ್ಯಾಷನ್‌ಗೆ ಉತ್ತೇಜನ ನೀಡುವುದು ಹಾಗೂ ಭಾರತ-ಡಬ್ಲ್ಯುಎಸ್‌ಎನ್ ನಡುವಿನ ದೀರ್ಘಕಾಲೀನ ಸಹಭಾಗಿತ್ವ ಬಲಪಡಿಸುವುದು ಪ್ರಮುಖ ಉದ್ದೇಶವಾಗಿದೆ.
ನೀಲಂ ಶಮಿ ರಾವ್ ಅವರ ಫ್ರಾನ್ಸ್ ಪ್ರವಾಸದ ವೇಳೆ ಭಾರತ ಟೆಕ್ಸ್ಟೈಲ್ ಟ್ರೇಡ್ ಫೆಡರೇಷನ್ ಮತ್ತು ‘ಪ್ರೀಮಿಯರ್ ವಿಷನ್ ಎಸ್‌ಎ’ ನಡುವೆ ಬಹುವರ್ಷಗಳ ಕಾರ್ಯತಂತ್ರದ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.
ಇದಲ್ಲದೆ, ಅವರು ಲಿಲ್ಲೆ ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಡೆಕಾಥಲಾನ್ ಸ್ಪೋರ್ಟ್ಸ್‌ಲ್ಯಾಬ್ ಹಾಗೂ ರೂಬೆಯ ಎನ್‌ಸೈಟ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿ ಜವಳಿ ಎಂಜಿನಿಯರಿಂಗ್, ಕ್ರೀಡಾ ಉಡುಪು, ಉತ್ಪನ್ನ ಸಂಶೋಧನೆ ಹಾಗೂ ನವೀನ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.