
ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಗಣೇಶೋತ್ಸವವನ್ನು ಶಿಸ್ತುಬದ್ಧವಾಗಿ, ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ನಗರದ ಎಲ್ಲ ಗಣೇಶ ಮಂಡಳಿಗಳ ಪೂರ್ವಭಾವಿ ಸಭೆಯನ್ನು ನಾಳೆ ಆಯೋಜಿಸಲಾಗಿದೆ.
ನಗರದ ಶ್ರೀ ಸಿದ್ದೇಶ್ವರ ಶಿವಾನುಭವ ಮಂಟಪದಲ್ಲಿ ಸೆ. 7ರಂದು ಸಂಜೆ 5.30ಕ್ಕೆ ಸಭೆ ನಡೆಯಲಿದ್ದು, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ನೇತೃತ್ವದಲ್ಲಿ ಸಭೆ ಜರುಗಲಿದೆ.
ಸ್ವಾಮಿ ವಿವೇಕಾನಂದ ಸೇನೆಯ ಗಜಾನನ ಮಹಾಮಂಡಳ ವತಿಯಿಂದ ಸಭೆಯನ್ನು ಆಯೋಜಿಸಲಾಗಿದ್ದು, ನಗರದ ವಿವಿಧ ಬಡಾವಣೆಗಳು ಹಾಗೂ ಪ್ರದೇಶಗಳಲ್ಲಿ ಗಣೇಶೋತ್ಸವ ಆಚರಿಸುತ್ತಿರುವ ಎಲ್ಲ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಪ್ರಮುಖರು ಹಾಗೂ ಗಣ್ಯರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ಸವ ಆಚರಣೆ, ಮೆರವಣಿಗೆ, ಶಿಸ್ತು ಮತ್ತು ಸುರಕ್ಷತೆ, ವಿವಿಧ ಮಂಡಳಿಗಳ ನಡುವೆ ಸಮನ್ವಯ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಅಲ್ಲದೇ ಗಣೇಶೋತ್ಸವವನ್ನು ಯಶಸ್ವಿಯಾಗಿ ನಡೆಸಲು ಮಂಡಳಿಗಳ ಪದಾಧಿಕಾರಿಗಳಿಂದ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲಾಗುವುದು.
ನಗರದಲ್ಲಿ ಪ್ರತಿವರ್ಷ ಗಣೇಶೋತ್ಸವವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಬಾರಿಯೂ ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಮಹತ್ವ ಪಡೆದುಕೊಂಡಿದೆ.
ನಗರದ ಎಲ್ಲ ಗಣೇಶ ಮಂಡಳಿಗಳ ಪದಾಧಿಕಾರಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆಯ ಗಜಾನನ ಮಹಾಮಂಡಳದ ಸದಸ್ಯ ಭೀಮು ಮಶ್ಯಾಳ ಅವರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande