ನಂದಿ ಸಕ್ಕರೆ ಕಾರ್ಖಾನೆ ಸಂಕಷ್ಟದಿಂದ ಎದ್ದು ಬರಲಿ:ಪ್ರಭುಸ್ವಾಮಿ ಹಿರೇಮಠ
ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.) ಆ್ಯಂಕರ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣನಗರದಲ್ಲಿ ಇರುವ ಈ ಭಾಗದ ಸಾವಿರಾರು ರೈತ ಕುಟುಂಬಗಳ ಆರ್ಥಿಕ ಬದುಕಿಗೆ ಆಸರೆಯಾಗಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಯಡಹಳ್ಳಿ
ನಂದಿ


ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣನಗರದಲ್ಲಿ ಇರುವ ಈ ಭಾಗದ ಸಾವಿರಾರು ರೈತ ಕುಟುಂಬಗಳ ಆರ್ಥಿಕ ಬದುಕಿಗೆ ಆಸರೆಯಾಗಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಯಡಹಳ್ಳಿ ಗ್ರಾಮದ ಪ್ರಭುಸ್ವಾಮಿ ಹಿರೇಮಠ ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಈ ಭಾಗದ ರೈತರ ಪಾಲಿಗೆ ‘ಕಾಮಧೇನು’ ಹಾಗೂ ‘ಕಲ್ಪವೃಕ್ಷ’ದಂತಿದ್ದ ನಂದಿ ಸಕ್ಕರೆ ಕಾರ್ಖಾನೆ, ಈ ನಾಡಿಗೆ ಸಕ್ಕರೆಯ ಸಿಹಿಯೊಂದಿಗೆ ರೈತರ ಬದುಕಿಗೂ ಆರ್ಥಿಕ ಬಲ ನೀಡಿತ್ತು. ಕಾರ್ಖಾನೆಯೊಂದಿಗೆ ನೇರವಾಗಿ ಕಬ್ಬು ಬೆಳೆಗಾರರು ಮಾತ್ರವಲ್ಲದೆ, ಕಾರ್ಮಿಕರು, ವ್ಯಾಪಾರಸ್ಥರು, ಸಾಗಣೆದಾರರು ಸೇರಿದಂತೆ ಸಾವಿರಾರು ಕುಟುಂಬಗಳ ಬದುಕು ಒಂದಲ್ಲ ಒಂದು ರೀತಿಯಲ್ಲಿ ಬೆಸೆದುಕೊಂಡಿದೆ. ಇಂತಹ ಸಂಸ್ಥೆ ಇಂದು ಆರ್ಥಿಕ ಸಂಕಷ್ಟದ ಸ್ಥಿತಿಗೆ ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.

ಯಡಹಳ್ಳಿಯ ಡಾ. ಎಂ.ಆರ್. ದೇಸಾಯಿ ಅವರ ಆಡಳಿತಾವಧಿಯ ನಂತರ ಬಂದ ಚುನಾಯಿತ ಆಡಳಿತ ಮಂಡಳಿಗಳು ಕೈಗೊಂಡ ವಿವಿಧ ನಿರ್ಣಯಗಳು ಹಾಗೂ ಆಡಳಿತಾತ್ಮಕ ತೀರ್ಮಾನಗಳ ಪರಿಣಾಮವಾಗಿ ಕಾರ್ಖಾನೆ ಇಂದಿನ ಪರಿಸ್ಥಿತಿಗೆ ತಲುಪಿದೆಯೇ ಎಂಬುದನ್ನು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ನಡೆದಾಗ ಮತ ಚಲಾಯಿಸಿದ ಶೇರುದಾರರಾಗಿರುವ ನಾವೂ ಸಹ ಇಂದಿನ ಪರಿಸ್ಥಿತಿಗೆ ನಮ್ಮದೇ ಆದ ಹೊಣೆಗಾರಿಕೆಯನ್ನು ಹೊಂದಿದ್ದೇವೆ. ಹೀಗಾಗಿ ತಪ್ಪುಗಳನ್ನು ಒಬ್ಬರ ಮೇಲೊಬ್ಬರು ಹೊರಿಸುವ ಬದಲು, ಹಿಂದಿನ ನಿರ್ಣಯಗಳು, ಆಡಳಿತ ಕ್ರಮಗಳು, ಹಣಕಾಸು ವ್ಯವಹಾರಗಳು ಹಾಗೂ ಕಾರ್ಖಾನೆಯ ಸಾಲದ ಪರಿಸ್ಥಿತಿ ಕುರಿತು ಸಮಗ್ರವಾಗಿ ಪರಿಶೀಲಿಸಿ ಮುಂದಿನ ದಾರಿ ಕಂಡುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

NCDC ಸಾಲದ ವಿಚಾರ ಆತಂಕ ಮೂಡಿಸಿದೆ

ನಂದಿ ಸಕ್ಕರೆ ಕಾರ್ಖಾನೆಯ ಆರ್ಥಿಕ ಸಂಕಷ್ಟದ ಕುರಿತು ಇತ್ತೀಚೆಗೆ ನಡೆದ ಪೂರ್ವಭಾವಿ ಹಿರಿಯರ ಸಭೆಯಲ್ಲಿ ಮಾಜಿ ನಿರ್ದೇಶಕ ರಮೇಶ್ ಬಿದಿನೂರು ಅವರು ಪ್ರಸ್ತಾಪಿಸಿರುವ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಗಮನಿಸಿದ್ದಾಗಿ ಹಿರೇಮಠ ತಿಳಿಸಿದ್ದಾರೆ.

ವಿಶೇಷವಾಗಿ NCDC ಸಾಲದ ವಿಚಾರ, ಕಾರ್ಖಾನೆಯ ಆರ್ಥಿಕ ಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ಸಹಕಾರಿ ಸಂಸ್ಥೆಯ ಸ್ವರೂಪಕ್ಕೆ ಎದುರಾಗಬಹುದಾದ ಸವಾಲುಗಳ ಕುರಿತು ಕೇಳಿಬರುತ್ತಿರುವ ಚರ್ಚೆಗಳು ತಮ್ಮಲ್ಲಿ ಆತಂಕ ಮೂಡಿಸಿವೆ ಎಂದು ಅವರು ಹೇಳಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಮಾಹಿತಿಯನ್ನು ಕೇವಲ ಆಧಾರವನ್ನಾಗಿ ಮಾಡಿಕೊಂಡು ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಆದರೆ ಈ ಎಲ್ಲ ವಿಚಾರಗಳ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ದಾಖಲೆಗಳು ಮತ್ತು ಅಧಿಕೃತ ಅಂಕಿ-ಅಂಶಗಳ ಆಧಾರದ ಮೇಲೆ ಪರಿಶೀಲಿಸುವುದು ಅತ್ಯಗತ್ಯ. ರೈತರ ಸಂಸ್ಥೆಯಾಗಿರುವ ನಂದಿ ಕಾರ್ಖಾನೆಯ ಭವಿಷ್ಯದ ಕುರಿತು ಯಾವುದೇ ಅನುಮಾನ ಉಳಿಯದಂತೆ ಪಾರದರ್ಶಕ ಮಾಹಿತಿ ಶೇರುದಾರರು ಹಾಗೂ ರೈತರಿಗೆ ದೊರೆಯಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಸಹಕಾರಿ ಸಂಸ್ಥೆ ಉಳಿಯುವುದು ರೈತರ ಹಿತದೃಷ್ಟಿಯಿಂದ ಅಗತ್ಯ

ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷ್ಣಾ ನದಿ ನೀರಿನ ಸೌಲಭ್ಯ, ಫಲವತ್ತಾದ ಭೂಮಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತ ಸಮುದಾಯ ಹಾಗೂ ದುಡಿಯುವ ಮಾನವ ಸಂಪನ್ಮೂಲವಿದೆ. ಪ್ರಗತಿಪರ ಚಿಂತನೆ ಹೊಂದಿರುವ ಜನರ ಪರಿಶ್ರಮದಿಂದ ಈ ಭಾಗದಲ್ಲಿ ಹಲವು ಸಹಕಾರಿ ಸಂಸ್ಥೆಗಳು ಬೆಳೆದು ನಿಂತಿವೆ.

ಅಂತಹ ಸಂಸ್ಥೆಗಳಲ್ಲಿ ನಂದಿ ಸಕ್ಕರೆ ಕಾರ್ಖಾನೆಯೂ ಪ್ರಮುಖ ಸ್ಥಾನ ಪಡೆದಿದೆ. ಕಾರ್ಖಾನೆಯ ಬೆಳವಣಿಗೆಯೊಂದಿಗೆ ಅನೇಕ ರೈತ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಿವೆ. ಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ಕೃಷಿ ಚಟುವಟಿಕೆಗಳು ಸೇರಿದಂತೆ ಕುಟುಂಬಗಳ ಹಲವು ಅಗತ್ಯಗಳಿಗೆ ಕಾರ್ಖಾನೆಯಿಂದ ದೊರೆತ ಆದಾಯ ನೆರವಾಗಿದೆ ಎಂದು ಅವರು ಸ್ಮರಿಸಿದ್ದಾರೆ.

“ನಂದಿ ಕಾರ್ಖಾನೆ ಕೇವಲ ಒಂದು ಕೈಗಾರಿಕಾ ಘಟಕವಲ್ಲ; ಇದು ಈ ಭಾಗದ ರೈತರ ಭಾವನಾತ್ಮಕ ಆಸ್ತಿ. ಕಾರ್ಖಾನೆ ಸ್ಥಾಪನೆಯ ಪೂರ್ವದಿಂದ ಇಂದಿನವರೆಗೂ ಅದರೊಂದಿಗೆ ಶೇರುದಾರನಾಗಿ ಹಾಗೂ ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ನಾನು, ನನ್ನಂತೆಯೇ ಅಸಂಖ್ಯಾತ ರೈತ ಕುಟುಂಬಗಳು ಕಾರ್ಖಾನೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆದಿರುವುದನ್ನು ಕಂಡಿದ್ದೇನೆ” ಎಂದು ಹಿರೇಮಠ ಹೇಳಿದ್ದಾರೆ.

ಅವಳಿ ಜಿಲ್ಲೆಗಳ ಸಂಸದರ ಪ್ರಯತ್ನ ಫಲಪ್ರದವಾಗಬೇಕಿತ್ತು

ಕಾರ್ಖಾನೆಯ ಸಂಕಷ್ಟದ ಕುರಿತು ಅವಳಿ ಜಿಲ್ಲೆಗಳ ಸಂಸದರು ಸಂಬಂಧಪಟ್ಟ ದೆಹಲಿ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿರುವುದು ಗಮನಾರ್ಹ. ಆದರೆ ಆ ಪ್ರಯತ್ನಗಳು ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವಾಗದಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.

ಕಾರ್ಖಾನೆಯ ಸಮಸ್ಯೆ ಕೇವಲ ಆಡಳಿತ ಮಂಡಳಿ ಅಥವಾ ಶೇರುದಾರರ ಸಮಸ್ಯೆಯಾಗಿ ಉಳಿಯಬಾರದು.

ಸಾವಿರಾರು ರೈತ ಕುಟುಂಬಗಳ ಬದುಕಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸಂಬಂಧಪಟ್ಟ ಹಣಕಾಸು ಸಂಸ್ಥೆಗಳು, ಜನಪ್ರತಿನಿಧಿಗಳು, ಆಡಳಿತ ಮಂಡಳಿ ಹಾಗೂ ಶೇರುದಾರರು ಒಟ್ಟಾಗಿ ಕುಳಿತು ಪರಿಹಾರದ ಮಾರ್ಗ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಖಾಸಗೀಕರಣದ ಆತಂಕಕ್ಕೆ ತೆರೆ ಎಳೆಯಬೇಕು

ಕಾರ್ಖಾನೆ ಆರ್ಥಿಕ ಸಂಕಷ್ಟದಿಂದ ಹೊರಬರದೆ ಹೋದರೆ ಮುಂದಿನ ದಿನಗಳಲ್ಲಿ ಸಹಕಾರಿ ಕಾರ್ಖಾನೆಯ ಸ್ವರೂಪಕ್ಕೆ ಧಕ್ಕೆ ಉಂಟಾಗಬಹುದೇ ಎಂಬ ಆತಂಕ ರೈತರಲ್ಲಿ ಮೂಡಿದೆ. ಇಂತಹ ಯಾವುದೇ ಬೆಳವಣಿಗೆಗೆ ಅವಕಾಶ ನೀಡದಂತೆ ಈಗಲೇ ಸಮಗ್ರ ಕ್ರಮ ಕೈಗೊಳ್ಳಬೇಕು ಎಂದು ಹಿರೇಮಠ ಹೇಳಿದ್ದಾರೆ.

“ನಂದಿ ಕಾರ್ಖಾನೆ ಖಾಸಗಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾದರೆ, ಅದು ಕೇವಲ ಒಂದು ಕಾರ್ಖಾನೆಯ ನಷ್ಟವಾಗುವುದಿಲ್ಲ. ಹಲವು ದಶಕಗಳ ಹಿಂದೆ ರೈತರು, ಹಿರಿಯರು ಹಾಗೂ ಈ ಭಾಗದ ಜನರು ಕಟ್ಟಿದ ಸಹಕಾರಿ ಕನಸಿಗೆ ದೊಡ್ಡ ಹೊಡೆತವಾಗಲಿದೆ. ಮುಂದಿನ ಪೀಳಿಗೆ ನಮ್ಮತ್ತ ತಿರುಗಿ ನೋಡುವಾಗ, ಇಂತಹ ಮಹತ್ವದ ಸಂಸ್ಥೆಯನ್ನು ಉಳಿಸಿಕೊಳ್ಳಲು ನಾವು ಏನು ಮಾಡಿದೆವು ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಫಿನಿಕ್ಸ್’ನಂತೆ ಮತ್ತೆ ಎದ್ದು ಬರಲಿ ನಂದಿ

ಸಂಕಷ್ಟಗಳು ಎಷ್ಟೇ ದೊಡ್ಡದಾಗಿದ್ದರೂ, ಅವುಗಳಿಂದ ಹೊರಬಂದು ಹೊಸ ಶಕ್ತಿಯೊಂದಿಗೆ ಮುನ್ನಡೆಯುವ ಸಾಧ್ಯತೆ ಇದೆ. ನಂದಿ ಸಕ್ಕರೆ ಕಾರ್ಖಾನೆಯೂ ಪ್ರಸ್ತುತ ಸಂಕಷ್ಟದಿಂದ ‘ಫಿನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು ಬಂದು’ ರೈತರ ಬದುಕಿನಲ್ಲಿ ಸಿಹಿ ತುಂಬುವ ದಿನಗಳು ಮರಳಿ ಬರಬೇಕು ಎಂಬುದು ಈ ಭಾಗದ ರೈತರ ಆಶಯವಾಗಿದೆ.

ಕಾರ್ಖಾನೆಯ ನೈಜ ಆರ್ಥಿಕ ಸ್ಥಿತಿ, ಸಾಲದ ಹೊರೆ, ಆಸ್ತಿಗಳು, ಬಾಕಿ ಪಾವತಿಗಳು, ಉತ್ಪಾದನಾ ಸಾಮರ್ಥ್ಯ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಶೇರುದಾರರು ಮತ್ತು ರೈತರಿಗೆ ಸಂಪೂರ್ಣ ಪಾರದರ್ಶಕ ಮಾಹಿತಿ ನೀಡಬೇಕು. ತಜ್ಞರ ಸಮಿತಿಯ ಮೂಲಕ ಆರ್ಥಿಕ ಹಾಗೂ ಆಡಳಿತಾತ್ಮಕ ಪರಿಶೀಲನೆ ನಡೆಸಿ, ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸಮಗ್ರ ‘ರಿವೈವಲ್ ಪ್ಲಾನ್’ ರೂಪಿಸಬೇಕು ಎಂದು ಪ್ರಭುಸ್ವಾಮಿ ಹಿರೇಮಠ ಒತ್ತಾಯಿಸಿದ್ದಾರೆ.

“ನಂದಿ ಕಾರ್ಖಾನೆ ಉಳಿಯಬೇಕು, ಬೆಳೆಯಬೇಕು. ಅದು ಮತ್ತೆ ರೈತರ ಪಾಲಿನ ಕಾಮಧೇನುವಾಗಿ, ಈ ಭಾಗದ ಆರ್ಥಿಕತೆಯ ಬೆನ್ನೆಲುಬಾಗಿ ನಿಲ್ಲಬೇಕು. ಅದಕ್ಕಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ನಿಲ್ಲಬೇಕಾದ ಸಮಯ ಬಂದಿದೆ” ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande