25 ಕೆಜಿ ತೂಕದ ಹೆಬ್ಬಾವು ಪ್ರತ್ಯಕ್ಷ: ಉರಗ ರಕ್ಷಕರಿಂದ ಸುರಕ್ಷಿತ ಸೆರೆ, ಅರಣ್ಯಕ್ಕೆ ಬಿಡುಗಡೆ
ಬಾಗಲಕೋಟೆ, 06 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರಸಿದ್ಧ ಬಾದಾಮಿ ಬನಶಂಕರಿ ದೇವಸ್ಥಾನದ ಪುಷ್ಕರ್ಣಿ ಬಳಿ ತಡರಾತ್ರಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷಗೊಂಡಿದ್ದು, ಕೆಲಕಾಲ ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನದ ಹೊ
ಹಾವು


ಬಾಗಲಕೋಟೆ, 06 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರಸಿದ್ಧ ಬಾದಾಮಿ ಬನಶಂಕರಿ ದೇವಸ್ಥಾನದ ಪುಷ್ಕರ್ಣಿ ಬಳಿ ತಡರಾತ್ರಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷಗೊಂಡಿದ್ದು, ಕೆಲಕಾಲ ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ದೇವಸ್ಥಾನದ ಹೊಂಡದ ಸಮೀಪ ರಾತ್ರಿ ಸುಮಾರು 1 ಗಂಟೆಯ ವೇಳೆಯಲ್ಲಿ ಸುಮಾರು 12 ಅಡಿ ಉದ್ದ ಹಾಗೂ 25 ಕೆಜಿ ತೂಕದ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದೆ. ಹೊಂಡದ ಬಳಿ ಹೆಬ್ಬಾವು ಕಂಡುಬಂದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಉರಗ ರಕ್ಷಕ ಸ್ನೇಕ್ ಮಹಾಂತೇಶ ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ನೇಕ್ ಮಹಾಂತೇಶ ಅವರು, ಯಾವುದೇ ರೀತಿಯ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಪರಿಣಿತ ರೀತಿಯಲ್ಲಿ ಬೃಹತ್ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದರು. ಬಳಿಕ ಹೆಬ್ಬಾವನ್ನು ಜನವಸತಿ ಹಾಗೂ ದೇವಸ್ಥಾನದ ಪರಿಸರದಿಂದ ದೂರವಿರುವ ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಶರಣು ಮಡಿವಾಳ ತಿಳಿಸಿದರು.

ಹೆಬ್ಬಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ದೇವಸ್ಥಾನಕ್ಕೆ ಆಗಮಿಸಿದ್ದವರಿಗೆ ಕೆಲಕಾಲ ಆತಂಕ ಉಂಟಾಗಿತ್ತು. ಆದರೆ ಉರಗ ರಕ್ಷಕರು ತಕ್ಷಣ ಕಾರ್ಯಪ್ರವೃತ್ತರಾಗಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ಪರಿಣಾಮ ಯಾವುದೇ ಅನಾಹುತ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಈ ಹಿಂದೆಯೂ ಹೆಬ್ಬಾವು ಮರಿಗಳ ಪತ್ತೆ

ಬನಶಂಕರಿ ದೇವಸ್ಥಾನದ ಪುಷ್ಕರ್ಣಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಹಿಂದೆಯೂ ಹೆಬ್ಬಾವುಗಳು ಕಾಣಿಸಿಕೊಂಡಿರುವ ಘಟನೆಗಳು ನಡೆದಿವೆ. ಇದೇ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಹೆಬ್ಬಾವಿನ ಮರಿಗಳು ಕಾಣಿಸಿಕೊಂಡಿದ್ದವು ಎಂದು ಸ್ಥಳೀಯರು ಸ್ಮರಿಸಿದ್ದಾರೆ. ಹೀಗಾಗಿ ದೇವಸ್ಥಾನದ ಹೊಂಡ ಹಾಗೂ ಸುತ್ತಮುತ್ತಲಿನ ಪ್ರದೇಶವು ಹೆಬ್ಬಾವುಗಳ ವಾಸಸ್ಥಳವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದೇವಸ್ಥಾನದ ಸುತ್ತಮುತ್ತ ಹಸಿರು ಪ್ರದೇಶ, ಪೊದೆಗಳು ಹಾಗೂ ನೀರಿನ ಲಭ್ಯತೆ ಇರುವುದರಿಂದ ವಿವಿಧ ಜಾತಿಯ ಉರಗಗಳು ಇಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ದೇವಸ್ಥಾನದ ಆವರಣ ಹಾಗೂ ಹೊಂಡದ ಸುತ್ತಮುತ್ತ ಸಂಚರಿಸುವಾಗ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.

ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ರಾಜು ಪಾಟೀಲ್ ಅವರು ಮಾತನಾಡಿ, ಪುಷ್ಕರ್ಣಿ ಬಳಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಲಾಯಿತು. ಸ್ನೇಕ್ ಮಹಾಂತೇಶ ಅವರು ಸ್ಥಳಕ್ಕೆ ಆಗಮಿಸಿ ಯಾವುದೇ ಅಪಾಯವಾಗದಂತೆ ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಸಕಾಲಿಕ ಕಾರ್ಯಾಚರಣೆಗೆ ಮೆಚ್ಚುಗೆ

ಹೆಬ್ಬಾವು ಪ್ರತ್ಯಕ್ಷಗೊಂಡ ಕೂಡಲೇ ಅದನ್ನು ಕೊಲ್ಲುವ ಅಥವಾ ಹಾನಿ ಮಾಡುವ ಬದಲು ಉರಗ ರಕ್ಷಕರಿಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಸೆರೆಹಿಡಿಸಿ ಅರಣ್ಯಕ್ಕೆ ಬಿಡಿಸಿರುವ ಸ್ಥಳೀಯರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುವ ಹೆಬ್ಬಾವು ಸೇರಿದಂತೆ ವನ್ಯಜೀವಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಸ್ನೇಕ್ ಮಹಾಂತೇಶ ಅವರ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾದ ಅನಾಹುತ ತಪ್ಪಿದ್ದು, ದೇವಸ್ಥಾನದ ಸುತ್ತಮುತ್ತ ಆತಂಕದಲ್ಲಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande