ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ
ಶವವನ್ನು ನಾಲೆಗೆ ಎಸೆದು ಜನರ ಜೊತೆ ಕುಳಿತು ಊಟ ಮಾಡಿದ ಆರೋಪಿ!
mandya-youth-naveen-murdered-over-land-dispute-body-thrown-into-canal-in-pandavapura


ಮಂಡ್ಯ, 05 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಪಾಂಡವಪುರ ತಾಲ್ಲೂಕಿನ ಕೊಳಬಾವಿ ಕಟ್ಟೆ ಬಳಿ ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು ಸಿಡಿಎಸ್ ನಾಲೆಗೆ ಎಸೆದಿರುವ ಘಟನೆ ನಡೆದಿದೆ.

ಮೃತ ನವೀನ್ ಕಟ್ಟುಕೊಟ್ಟೇರಿ ಗ್ರಾಮದ ನಿವಾಸಿ. ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಅದೇ ಗ್ರಾಮದ ಕಾಂತರಾಜು ಹಾಗೂ ನವೀನ್ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ತಡರಾತ್ರಿ ಜಮೀನಿನ ಬಳಿ ನವೀನ್ ಹಾಗೂ ಕಾಂತರಾಜು ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದಾಗ ಕಾಂತರಾಜು ನವೀನ್‌ನನ್ನು ಕೊಲೆ ಮಾಡಿ ಶವವನ್ನು ನಾಲೆಗೆ ಎಸೆದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಕೃತ್ಯದ ಬಳಿಕವೂ ಆರೋಪಿ ಯಾವುದೇ ಆತಂಕವಿಲ್ಲದೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಕುಳಿತು ಊಟ ಮಾಡಿ ತೆರಳಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಕೆಆರ್‌ಎಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಲೆಯಲ್ಲಿ ಶವಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande