
ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಮಕ್ಕಳನ್ನು ಸಜ್ಜುಗೊಳಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈ ವರ್ಷದ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಅವರು, ಶಿಕ್ಷಕರು ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳನ್ನು ಎದುರಿಸುವಂತೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಿದ್ಧಪಡಿಸಬೇಕು ಎಂದರು.
ವಿದ್ಯಾರ್ಥಿಗಳು ದೇಶದ ದೊಡ್ಡ ಸಂಪತ್ತು. ಅವರ ಬೆಳವಣಿಗೆ ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗಬಾರದು. ಜ್ಞಾನ, ಕೌಶಲ್ಯ, ಆತ್ಮವಿಶ್ವಾಸ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಮೂಲಕ ಅವರನ್ನು ಸಮಗ್ರ ವ್ಯಕ್ತಿತ್ವದೊಂದಿಗೆ ರೂಪಿಸಬೇಕು ಎಂದು ಪ್ರಹ್ಲಾದ್ ಜೋಶಿ ಕರೆ ನೀಡಿದರು.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೊಡುಗೆ ಮತ್ತು ಅನುಭವಗಳನ್ನು ಶ್ಲಾಘಿಸಿದ ಅವರು, ಶಿಕ್ಷಕರ ಪರಿಶ್ರಮ ಹಾಗೂ ನವೀನ ಬೋಧನಾ ಪ್ರಯೋಗಗಳು ದೇಶದ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವರಾದ ಜಯಂತ್ ಚೌಧರಿ ಹಾಗೂ ಡಾ. ಸುಕಾಂತ್ ಮಜುಂದಾರ್ ಉಪಸ್ಥಿತರಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.