
ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ದೇಶದ ಶಿಕ್ಷಕರಿಗೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ಮಹಾನ್ ತತ್ವಜ್ಞಾನಿ, ಶಿಕ್ಷಕ ಹಾಗೂ ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿದರು. ಜ್ಞಾನ ಮತ್ತು ಮೌಲ್ಯಗಳ ಮೂಲಕ ಶಿಕ್ಷಕರು ದೇಶದ ಭವಿಷ್ಯ ರೂಪಿಸುತ್ತಿದ್ದು, ವಿಕಸಿತ ಭಾರತದ ಬುನಾದಿ ಹಾಕುತ್ತಿದ್ದಾರೆ ಎಂದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಜ್ಞಾನ ಮತ್ತು ಶಿಕ್ಷಣದ ಉನ್ನತ ಆದರ್ಶಗಳಿಗೆ ಪ್ರತೀಕವಾಗಿತ್ತು ಎಂದು ಸ್ಮರಿಸಿದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶಿಕ್ಷಕರು ತಮ್ಮ ಜ್ಞಾನ, ಸಂಸ್ಕಾರ ಹಾಗೂ ಮಾರ್ಗದರ್ಶನದ ಮೂಲಕ ಮುಂದಿನ ಪೀಳಿಗೆಯನ್ನು ರೂಪಿಸುವ ಸಮಾಜದ ಶಿಲ್ಪಿಗಳು ಎಂದು ಹೇಳಿದರು. ರಾಷ್ಟ್ರದ ಪ್ರಗತಿ ಕೇವಲ ಆರ್ಥಿಕ ಶಕ್ತಿ ಮತ್ತು ಸಂಪನ್ಮೂಲಗಳಿಂದ ನಿರ್ಧಾರವಾಗುವುದಿಲ್ಲ. ನಾಗರಿಕರ ಶಿಕ್ಷಣ, ಚಿಂತನೆ, ವ್ಯಕ್ತಿತ್ವ ಹಾಗೂ ಜವಾಬ್ದಾರಿಯ ಪ್ರಜ್ಞೆಯೂ ಪ್ರಮುಖವಾಗಿದೆ ಎಂದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶ ಮತ್ತು ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಂಚೂಣಿಯಲ್ಲಿದೆ ಎಂದು ಹೇಳಿ, ಎಲ್ಲ ಶಿಕ್ಷಕರಿಗೂ ಶುಭಾಶಯ ಸಲ್ಲಿಸಿದರು.
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ನಮನ ಸಲ್ಲಿಸಿ, ಅವರ ಅಮೂಲ್ಯ ಪರಂಪರೆ ಜ್ಞಾನಸಮೃದ್ಧ ಭಾರತ ನಿರ್ಮಾಣಕ್ಕೆ ನಿರಂತರ ಪ್ರೇರಣೆ ನೀಡಲಿದೆ ಎಂದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ದೇಶದ ಪ್ರತಿಯೊಂದು ಯಶಸ್ಸಿನ ಹಿಂದೆ ಯಾವುದಾದರೂ ಶಿಕ್ಷಕರ ಕೊಡುಗೆ ಇರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿ, ಆಲೋಚನೆಗಳಿಗೆ ದಿಕ್ಕು ನೀಡಿ, ಕನಸುಗಳನ್ನು ನನಸು ಮಾಡಿಕೊಳ್ಳುವ ಧೈರ್ಯ ತುಂಬುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶಿಕ್ಷಕರು ಚಿಂತನೆಗೆ ರೂಪ ನೀಡುತ್ತಾರೆ, ಮೌಲ್ಯಗಳನ್ನು ಬೆಳೆಸುತ್ತಾರೆ ಹಾಗೂ ದೇಶದ ಭವಿಷ್ಯಕ್ಕೆ ಬಲಿಷ್ಠ ಅಡಿಪಾಯ ಹಾಕುತ್ತಾರೆ ಎಂದು ಹೇಳಿದರು.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಶಿಕ್ಷಕರು ಜ್ಞಾನದ ದಾರಿ ಬೆಳಗಿಸಿ, ಯುವ ಮನಸ್ಸುಗಳಿಗೆ ಪ್ರೇರಣೆ ನೀಡುವುದರ ಜೊತೆಗೆ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಮೌಲ್ಯಗಳನ್ನು ಬೆಳೆಸುತ್ತಾರೆ ಎಂದರು.
ಕೇಂದ್ರ ಕೃಷಿ, ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಿನ ಮಹತ್ವವನ್ನು ಸಾರುತ್ತಾ, ಗುರುವಿಗಿಂತ ದೊಡ್ಡ ದೇವರು ಮತ್ತೊಬ್ಬರಿಲ್ಲ ಎಂದು ಹೇಳಿದರು. ಹಸಿ ಮಣ್ಣಿನಂತಿರುವ ಮಕ್ಕಳಿಗೆ ರೂಪ ನೀಡಿ, ಅವರಲ್ಲಿ ಜೀವ ತುಂಬುವ ಕಾರ್ಯವನ್ನು ಗುರುಗಳು ಮಾಡುತ್ತಾರೆ ಎಂದು ಬಣ್ಣಿಸಿದರು. ಎಲ್ಲರ ಜೀವನದಲ್ಲೂ ಗುರುಗಳ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.