ಪ್ರಜಾಸೇವಾ ಆಂದೋಲನ - ದೇಶಕ್ಕೆ ಮಾದರಿ
ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ರಾಜ್ಯದಲ್ಲಿ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಯನ್ನು ತಲುಪಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸುವ ಪರಿಕಲ್ಪನೆಯೊಂದಿಗೆ ಚಾಲನೆ ನೀಡಲಾಗಿರುವ ಪ್ರಜಾಸೇವಾ
ಪ್ರಜಾಸೇವಾ ಆಂದೋಲನ - ದೇಶಕ್ಕೆ ಮಾದರಿ


ಪ್ರಜಾಸೇವಾ ಆಂದೋಲನ - ದೇಶಕ್ಕೆ ಮಾದರಿ


ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ರಾಜ್ಯದಲ್ಲಿ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಯನ್ನು ತಲುಪಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸುವ ಪರಿಕಲ್ಪನೆಯೊಂದಿಗೆ ಚಾಲನೆ ನೀಡಲಾಗಿರುವ ಪ್ರಜಾಸೇವಾ ಆಂದೋಲನ ಸಭೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಶ್ಲಾಘಿಸಿದರು.

ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಬಿ. ನಾಗೇಂದ್ರ ಅವರು ಮಾತನಾಡಿ, ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಗೆ ಅಲೆದಾಡುವ ಹಾಗೂ ತಮ್ಮ ಸರ್ಕಾರಿ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಪದೇ ಪದೇ ಅಲೆದಾಡುವ ಕಾಲ ಈಗ ಮುಗಿದಿದೆ. ಸರ್ಕಾರವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು. ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ನಿಗದಿತ ಕಾಲಮಿತಿಯಲ್ಲಿ ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬೇಕು ಎನ್ನುವ ಸದುದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸು. ಇದಕ್ಕಾಗಿಯೇ ಪ್ರತ್ಯೇಕ ಇಲಾಖೆ ಹಾಗೂ ಸಚಿವಾಲಯವನ್ನು ಪ್ರಾರಂಭಿಸಿ, ಅಗತ್ಯ ಹುದ್ದೆಗಳನ್ನು ಕೂಡ ಭರ್ತಿ ಮಾಡಿ, ಇಂದಿನಿ0ದಲೇ ಕಾರ್ಯರೂಪಕ್ಕೆ ತಂದಿದ್ದಾರೆ. ಸಾರ್ವಜನಿಕರು 1902 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಐಪಿಜಿಆರ್ಎಸ್ ಪೋರ್ಟಲ್ ಮೂಲಕ ತಮ್ಮ ಸಮಸ್ಯೆಗಳನ್ನು ದಾಖಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದರು.

ಗ್ರಾಮೀಣ ಯುವಕರಿಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಕಿಕೊಳ್ಳುವಂತೆ ಮಾಡಿ, ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದ ಉದ್ದೇಶದಿಂದ ರಾಜ್ಯದ ಪ್ರತಿ ಪಂಚಾಯತಿಗೆ ಒಂದರ0ತೆ ಸುಮಾರು 10 ಸಾವಿರ ಭಾರತ್ ಜೋಡೋ ಸಂಘಗಳನ್ನು ಸ್ಥಾಪಿಸಿ, ಹಳ್ಳಿಗಳಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ನಾಯಕತ್ವದ ಪ್ರತಿಭೆಗಳನ್ನು ಹೊರತರುವ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸಲು ಉದ್ದೇಶಿಸಲಾಗಿದೆ. ಇದು ಕೂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿ ಯೋಜನೆಯಾಗಿದೆ. ಪ್ರತಿ ಸಂಘಕ್ಕೂ ವಾರ್ಷಿಕ 10 ಲಕ್ಷ ರೂ. ಅನುದಾನ ಒದಗಿಸಲಾಗುವುದು. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ (ಪಿಪಿಪಿ) ಮಾದರಿಯಲ್ಲಿ, ಇಂತಹ ಅದ್ಭುತ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ರಾಜ್ಯದ ಯುವಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಶಾಸಕ ಬಿ. ನಾಗೇಂದ್ರ ಕರೆ ನೀಡಿದರು.

ಮತದಾರರ ವಿಶೇಷ ಸಮಗ್ರ ಪರಿಶೀಲನಾ ಕಾರ್ಯದ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದು, ಸ್ಥಳಾಂತರ ಅಥವಾ ಎರಡೆರಡು ಕಡೆ ಹೆಸರು ಇರುವುದು, ಈ ರೀತಿಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಅರ್ಹ ಮತದಾರರಿಗೆ ಅವಕಾಶ ಕಲ್ಪಿಸಿದ್ದು, ಯಾವುದೇ ಅರ್ಹ ಮತದಾರರು ಮತ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು, ರಾಜ್ಯದ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದಿದೆ. ಈ ಯೋಜನೆಗಳ ಜೊತೆಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೂ ಕೂಡ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಬಳ್ಳಾರಿಗೆ ತುಂಗಭದ್ರಾದಿಂದ 270 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಇದೇ ಸೆ. 11 ರಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಲಾಗುವುದು. ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಯುವಜನರು ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಬಳ್ಳಾರಿ ನಗರದ ಹಳೆಯ ಗ್ರಂಥಾಲಯ ಬಳಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಡಾ. ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ ಅವರು, ಸಾರ್ವಜನಿಕರ ಯಾವುದೇ ಸಮಸ್ಯೆಗೆ ಕಾನೂನುಬದ್ಧವಾಗಿ ಪರಿಹಾರ ಕಲ್ಪಿಸಬೇಕು. ಕ್ರಮಬದ್ಧವಲ್ಲದ ಅಥವಾ ಕಾನೂನು ವ್ಯಾಪ್ತಿಗೆ ಬಾರದ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಾಧ್ಯಮಗಳು ಸಹ ಸಹಕಾರ ನೀಡಬೇಕು. ಜನರ ಕುಂದುಕೊರತೆಗಳು ತಾತ್ವಿಕ ಅಂತ್ಯ ಕಾಣಬೇಕು. ಜನರು ತಮ್ಮ ಕೆಲಸಗಳಿಗೆ ಪದೇ ಪದೇ ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಪ್ರತಿ ಶನಿವಾರ ನಡೆಯುವ ಪ್ರಜಾಸೇವಾ ಆಂದೋಲನ ಸಭೆಗಳ ಮೂಲಕ ಸ್ಥಳೀಯ ಸಮಸ್ಯೆಗಳು ಸ್ಥಳೀಯವಾಗಿಯೇ ಪರಿಹಾರ ಕಾಣಬೇಕು ಎಂದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಪ್ರಜಾಸೇವಾ ಆಂದೋಲನ ಸಭೆಯ ರೂಪುರೇಷೆಗಳನ್ನು ವಿವರಿಸಿ, ರಾಜ್ಯ ಸರ್ಕಾರದ ಆಶಯದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಗ್ರಾಮಗಳ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಕಾರ್ಯಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಪ್ರತಿ ತಿಂಗಳ ಮೊದಲ ಮತ್ತು ಮೂರನೆ ಶನಿವಾರದಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಎರಡನೆ ಮತ್ತು ನಾಲ್ಕನೆ ಶನಿವಾರ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಆಯಾ ಶಾಸಕರುಗಳ ನೇತೃತ್ವದಲ್ಲಿ ಪ್ರಜಾಸೇವಾ ಸಭೆ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಗಳ ಅಧಿಕಾರಿಗಳು ಪ್ರತಿ ಸೋಮವಾರ ಅಹವಾಲುಗಳ ಕುರಿತು ಮಾಹಿತಿ ಪಡೆದು, ಮಂಗಳವಾರ ಅವುಗಳ ಪರಿಶೀಲನೆ ನಡೆಸುವರು. ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಪ್ರಜಾಸೇವಾ ಸಭೆಗಳನ್ನು ನಡೆಸುವ ಸ್ಥಳ ಹಾಗೂ ವೇಳಾಪಟ್ಟಿಯನ್ನು ಪ್ರಚುರಪಡಿಸಲಾಗುವುದು. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಹಾಗೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande