
ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಕಲಿಕೆಯ ಜೊತೆಗೆ ಅವರ ವರ್ತನೆ, ದೈನಂದಿನ ಚಟುವಟಿಕೆಗಳು ಮತ್ತು ಮಾನಸಿಕ ಸ್ಥಿತಿಯ ಬಗ್ಗೆಯೂ ಶಿಕ್ಷಕರು ಗಮನ ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನ ಹಾಗೂ ಅತಿಯಾದ ಪರದೆ ಬಳಕೆಯ ಕುರಿತು ಶಿಕ್ಷಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಶುಕ್ರವಾರ ಸಂಜೆ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಶಿಕ್ಷಕರ ದಿನಾಚರಣೆಯ ಮುನ್ನಾದಿನ ನಡೆದ ಕಾರ್ಯಕ್ರಮದಲ್ಲಿ ಈ ವರ್ಷದ 82 ಪ್ರಶಸ್ತಿ ಪುರಸ್ಕೃತರು ಭಾಗವಹಿಸಿದ್ದರು. ಇವರಲ್ಲಿ 48 ಶಾಲಾ ಶಿಕ್ಷಕರು, 21 ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪಾಲಿಟೆಕ್ನಿಕ್‌ಗಳ ಶಿಕ್ಷಕರು ಮತ್ತು 13 ಕೌಶಲ್ಯ ತರಬೇತುದಾರರು ಇದ್ದರು.
ಶಿಕ್ಷಕರ ಜವಾಬ್ದಾರಿ ಕೇವಲ ಪಠ್ಯಕ್ರಮ ಪೂರ್ಣಗೊಳಿಸುವುದಕ್ಕೆ ಸೀಮಿತವಾಗಿಲ್ಲ ಎಂದು ಪ್ರಧಾನಿ ಹೇಳಿದರು. ವಿದ್ಯಾರ್ಥಿಗಳ ವರ್ತನೆಯಲ್ಲಿ ಕಂಡುಬರುವ ಬದಲಾವಣೆಗಳನ್ನು ಗುರುತಿಸಿ, ಅಗತ್ಯವಿದ್ದಲ್ಲಿ ವೈಯಕ್ತಿಕ ಮಾರ್ಗದರ್ಶನ ನೀಡಬೇಕು ಎಂದರು.
ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಜೀವನದಲ್ಲಿ ಶಿಕ್ಷಕರ ಪಾತ್ರ ಹಿಂದೆಂದಿಗಿಂತಲೂ ಮಹತ್ವದ್ದಾಗಿದೆ ಎಂದು ಮೋದಿ ತಿಳಿಸಿದರು. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರು ಅವರೊಂದಿಗೆ ಹೆಚ್ಚಿನ ಸಂವಾದ ನಡೆಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಅವರು, ವಿದ್ಯಾರ್ಥಿಗಳ ವರ್ತನೆಯಲ್ಲಿ ಹಠಾತ್ ಬದಲಾವಣೆ ಕಂಡುಬಂದರೆ ಶಿಕ್ಷಕರು ಗಮನಹರಿಸಬೇಕು. ಯಾವುದೇ ಮಗುವಿನಲ್ಲಿ ಮಾದಕ ವ್ಯಸನದ ಲಕ್ಷಣಗಳು ಕಂಡುಬಂದರೆ, ಆ ಮಗುವಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಸ್ಯೆಯಿಂದ ಹೊರಬರಲು ನೆರವಾಗಬೇಕು ಎಂದರು.
ಅತಿಯಾದ ಪರದೆ ಬಳಕೆಯ ಬಗ್ಗೆಯೂ ಮಕ್ಕಳ ಕುರಿತು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಮಕ್ಕಳ ಸಹಜ ಕುತೂಹಲವನ್ನು ನಿಗ್ರಹಿಸುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಬೇಕು. ಅವರ ಮುಗ್ಧತೆ ಮತ್ತು ಕಲಿಯುವ ಆಸಕ್ತಿಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದರು.
ವಿದ್ಯಾರ್ಥಿಗಳಲ್ಲಿ ಶ್ರಮದ ಗೌರವದ ಮನೋಭಾವ ಬೆಳೆಸುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮೋದಿ ಹೇಳಿದರು. ಪರಿಶ್ರಮದ ಮಹತ್ವ ಹಾಗೂ ಪ್ರತಿಯೊಂದು ಕೆಲಸಕ್ಕೂ ಗೌರವ ನೀಡುವ ಮೌಲ್ಯವನ್ನು ಮಕ್ಕಳಿಗೆ ಕಲಿಸಬೇಕು ಎಂದು ಕರೆ ನೀಡಿದರು.
ಸಂವಾದದ ವೇಳೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತರು ತಮ್ಮ ಬೋಧನಾ ಅನುಭವಗಳನ್ನು ಪ್ರಧಾನಿಯೊಂದಿಗೆ ಹಂಚಿಕೊಂಡರು. ತರಗತಿ ಬೋಧನೆಯನ್ನು ಪರಿಣಾಮಕಾರಿಯಾಗಿ, ಆಸಕ್ತಿದಾಯಕವಾಗಿ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿಸಲು ಕೈಗೊಂಡಿರುವ ವಿವಿಧ ನವೀನ ಪ್ರಯೋಗಗಳ ಕುರಿತು ಶಿಕ್ಷಕರು ವಿವರಿಸಿದರು.
ಶಿಕ್ಷಕರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಶಿಕ್ಷಣವು ಕೇವಲ ಪುಸ್ತಕಗಳು ಮತ್ತು ಪರೀಕ್ಷೆಗಳಿಗೆ ಸೀಮಿತವಾಗಿಲ್ಲ. ಮಕ್ಕಳ ಸಮಗ್ರ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
-------
ಹಿಂದೂಸ್ತಾನ್ ಸಮಾಚಾರ್ / Rakesh.M.B.