
ಗದಗ, 05 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ)-2013ರ ಅಡಿಯಲ್ಲಿ ಪಡಿತರ ಚೀಟಿದಾರರ ಇ-ಕೆವೈಸಿ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದ್ದು, ಜಿಲ್ಲೆಯ ಅರ್ಹ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ, ಬಾಕಿ ಉಳಿದಿರುವ ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಇ-ಕೆವೈಸಿ ದೃಢೀಕರಿಸಿ ಐದು ವರ್ಷ ಪೂರ್ಣಗೊಂಡಿರುವ ಒಟ್ಟು 4,59,453 ಫಲಾನುಭವಿಗಳ ಪೈಕಿ ಇದುವರೆಗೆ 18,815 ಫಲಾನುಭವಿಗಳು ಮಾತ್ರ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಇನ್ನೂ 3,80,815 ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಪಟ್ಟಿ ಲಭ್ಯ
ಇ-ಕೆವೈಸಿ ಮಾಡಿಸಿಕೊಳ್ಳಬೇಕಿರುವ ಫಲಾನುಭವಿಗಳ ಪಟ್ಟಿಯನ್ನು ಆಯಾ ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಲಾಗಿದೆ. ಹೀಗಾಗಿ ಪಡಿತರ ಚೀಟಿದಾರರು ತಮ್ಮ ಹೆಸರಿಗೆ ಜೋಡಣೆಯಾಗಿರುವ ನ್ಯಾಯಬೆಲೆ ಅಂಗಡಿಗೆ ಖುದ್ದಾಗಿ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಪಡಿತರ ಚೀಟಿದಾರರು ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದರಿಂದ ಕೊನೆಯ ದಿನಗಳಲ್ಲಿ ಉಂಟಾಗಬಹುದಾದ ಜನದಟ್ಟಣೆ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಇ-ಕೆವೈಸಿಗೆ ಯಾವುದೇ ಶುಲ್ಕವಿಲ್ಲ
ಪಡಿತರ ಚೀಟಿದಾರರಿಗೆ ಮತ್ತೊಂದು ಪ್ರಮುಖ ಮಾಹಿತಿಯನ್ನು ನೀಡಿರುವ ಇಲಾಖೆ, ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಫಲಾನುಭವಿಗಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ಇ-ಕೆವೈಸಿ ಮಾಡಿಸುವ ಸಂದರ್ಭದಲ್ಲಿ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಪಡಿತರ ಚೀಟಿದಾರರು ಎಚ್ಚರಿಕೆ ವಹಿಸಬೇಕು. ಇ-ಕೆವೈಸಿ ಹೆಸರಿನಲ್ಲಿ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಾವತಿಸಬಾರದು ಎಂದು ಇಲಾಖೆ ಸೂಚಿಸಿದೆ.
ಬಾಕಿ ಫಲಾನುಭವಿಗಳು ತಕ್ಷಣ ಕ್ರಮ ಕೈಗೊಳ್ಳಲಿ
ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ಇ-ಕೆವೈಸಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಅರ್ಹ ಪಡಿತರ ಚೀಟಿದಾರರು ನಿರ್ಲಕ್ಷ್ಯ ವಹಿಸದೆ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವುದು ಅಗತ್ಯವಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರ ಗುರುತು ಹಾಗೂ ಫಲಾನುಭವಿ ಮಾಹಿತಿಯನ್ನು ದೃಢೀಕರಿಸುವ ಉದ್ದೇಶದಿಂದ ಇ-ಕೆವೈಸಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಫಲಾನುಭವಿಗಳ ಮಾಹಿತಿ ನಿಖರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಲು ಈ ಪ್ರಕ್ರಿಯೆ ಸಹಕಾರಿಯಾಗಲಿದೆ.
ಆದ್ದರಿಂದ ಜಿಲ್ಲೆಯ ಎಲ್ಲ ಬಾಕಿ ಇರುವ ಪಡಿತರ ಚೀಟಿದಾರರು ಸೆಪ್ಟೆಂಬರ್ 30ರೊಳಗೆ ತಮ್ಮ ಜೋಡಣೆಯ ನ್ಯಾಯಬೆಲೆ ಅಂಗಡಿಗೆ ತೆರಳಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP