
ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಂಜಾರ ಬುಡಕಟ್ಟು ಜನಾಂಗದ ಸಾಂಸ್ಕøತಿಕ ಶ್ರೀಮಂತಿಕೆ, ಜೀವನಾನುಭವಗಳು ಹಾಗೂ ಭಾವನೆಗಳನ್ನು ಕೃತಿಯ ರೂಪದಲ್ಲಿ ದಾಖಲಿಸಿ ಮುಂದಿನ ಪೀಳಿಗೆಗೆ ಅಕ್ಷರ ಮತ್ತು ಸಾಹಿತ್ಯದ ಮೂಲಕ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಬಳ್ಳಾರಿ-ಕಲಬುರಗಿ ವಿಭಾಗದ ಆಯುಕ್ತರಾದ ಡಾ. ಕುಮಾರ್ ನಾಯ್ಕ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ `ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಡಿ. ಕಗ್ಗಲ್ ಹಾಗೂ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ, ಬಳ್ಳಾರಿ' ಇವರ ಸಹಯೋಗದಲ್ಲಿ ಶನಿವಾರ ನಡೆದ ಶಿರಗಾನಹಳ್ಳಿ ಶಾಂತನಾಯ್ಕ ಅವರ ‘ಬಂಜಾರ ಬುಡಕಟ್ಟು ಜನಪದ ಕಥೆಗಳು’ ಕೃತಿ ಲೋಕಾರ್ಪಣೆ ಹಾಗೂ ಶಿಕ್ಷಕರ ದಿನಾಚರಣೆ-2026ರನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರ ಸಮುದಾಯವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಬಂಜಾರರ ಜೀವನ, ಆಚರಣೆಗಳು - ಸಂಪ್ರದಾಯಗಳು ಹಾಗೂ ಕಥನಗಳನ್ನು ಬರವಣಿಗೆಯ ರೂಪದಲ್ಲಿ ದಾಖಲಿಸಿರುವುದು ವಿರಳ. ಇಂಥಹಾ ಮಹತ್ವದ ಕೃತಿಯನ್ನು ಸಾಹಿತ್ಯಾಸಕ್ತರ ಕೈಗಿಡುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತರಾದ ರವೀಂದ್ರ ಭಟ್ ಅವರು ಕೃತಿಯನ್ನು ಬಿಡುಗಡೆ ಮಾಡಿ, ಬುಡಕಟ್ಟು ಸಮುದಾಯದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅದನ್ನು ಅಕ್ಷರ ರೂಪದಲ್ಲಿ ಮುಂದಿನ ಪೀಳಿಗೆಗೆ ಹಾಗೂ ಓದುಗರಿಗೆ ತಲುಪಿಸುತ್ತಿರುವುದು ಸಂತೋಷದ ವಿಷಯ.
ನಾವೆಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂಬ ಸಂದೇಶವನ್ನು ಈ ಕೃತಿ ಸಾರುತ್ತದೆ ಎಂದರು.
ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಡಾ. ವೀರಭದ್ರಪ್ಪ ಹೆಚ್. ಅವರು, ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕಥೆಗಳ ಮೂಲ ಉದ್ದೇಶ ಕಲ್ಪನೆಯ ವಿಸ್ತಾರವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಕಥೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃತಿಯ ಕುರಿತು ಲೇಖಕ ಡಾ. ಸಿದ್ದರಾಮ ಕಲ್ಮಠ ಅವರು, ಯಾವುದೇ ಭಾಷೆ, ಸಂಸ್ಕøತಿ, ಆಚರಣೆಗಳು ಮತ್ತು ಸಂಪ್ರದಾಯಗಳು ಜೀವಂತವಾಗಿ ಇರಬೇಕು ಎನ್ನುವಲ್ಲಿ ಅಕ್ಷರ ಮತ್ತು ಸಾಹಿತ್ಯದ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ಬಂಜಾರ ಸಂಪ್ರದಾಯಗಳು - ಆಚರಣೆಗಳು ಮತ್ತು ಸಂಸ್ಕøತಿ - ಭಾಷೆಯನ್ನು ಭಾವನೆಗಳ ಮೂಲಕ ಹಿಡಿದಿಡುವಲ್ಲಿ ಲೇಖಕರು ಯಶಸ್ಸನ್ನು ಸಾಧಿಸಿದ್ದಾರೆ ಎಂದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥರಾದ ಡಾ. ದಸ್ತಗಿರ್ ಸಾಬ್ ದಿನ್ನಿ, ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಅಧ್ಯಾಪಕರಾದ ಡಾ. ಜಯದೇವ ಅವರು ವೇದಿಕೆಯಲ್ಲಿದ್ದರು. ಶಾಂತನಾಯಕ್ ಅವರಿಗೆ ಉತ್ತಮ ಶಿಕ್ಷಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿಂಧೂ ಅಂಬಿಕ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಸ್ವಾಗತಿಸಿದರು. ಉಪನ್ಯಾಸಕ ಆಲಂಭಾಷ ಅವರು ಕಾರ್ಯಕ್ರಮ ನಿರೂಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್