ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಒತ್ತಾಯ
ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಒತ್ತಾಯ
ಮಾಜಿ ಸಭಾಪತಿ ವಿ.ಆರ್. ಸುದರ್ಶನ್


ಕೋಲಾರ, 04 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಬಯಲುಸೀಮೆ ಕೋಲಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ, ಬರ ಪರಿಹಾರ ಕಾಮಗಾರಿಗಳು ಹಾಗೂ ಮೂಲಸೌಕರ್ಯ ಬಲವರ್ಧನೆಗೆ ಸಂಬಂಧಿಸಿದಂತೆ ೧೫ ಪ್ರಮುಖ ಅಂಶಗಳನ್ನೊಳಗೊಂಡ ಸಮಗ್ರ ಬೇಡಿಕೆಗಳ ಮನವಿ ಪತ್ರವನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದ್ದಾರೆ.

ಸರ್ಕಾರದ ಹಂತದಲ್ಲಿ ನೂತನವಾಗಿ ಆರಂಭವಾಗಿರುವ ಪ್ರಜಾ ಸೇವಾ ಇಲಾಖೆ ಹಾಗೂ ಪ್ರಜಾ ಸೇವಾ ಆಂದೋಲನದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಜ್ವಲಂತ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಸಕಾಲದಲ್ಲಿ ಮಳೆಯಾಗದೆ ಕೋಲಾರ ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿದೆ. ರೈತರು ಹಾಗೂ ಕೃಷಿ ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಜನತೆಗೆ ಉದ್ಯೋಗ ಸೃಷ್ಟಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯಯೋಜನೆಗಳನ್ನು ರೂಪಿಸಬೇಕು. ಕೆ.ಸಿ. ವ್ಯಾಲಿ ಯೋಜನೆಯಿಂದ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡುಬ0ದಿದ್ದು, ಯೋಜನೆಯ ೨ನೇ ಮತ್ತು ೩ನೇ ಹಂತದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ಅಂದರೆ ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ, ಆಂಧ್ರಪ್ರದೇಶ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೃಷ್ಣಾ ನದಿ ನೀರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬಳಸಿಕೊಳ್ಳಲು ಜನಪ್ರತಿನಿಧಿಗಳ ನಿಯೋಗ ರಚಿಸಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯ ಬಜೆಟ್ ಹಾಗೂ ವಿಧಾನಮಂಡಲದಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಕೋಲಾರ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾರಿಗೆ ವೇಗ ನೀಡಿ, ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯೊಂದಿಗೆ ೨೦೨೭-೨೮ನೇ ಸಾಲಿನಲ್ಲೇ ತರಗತಿಗಳನ್ನು ಪ್ರಾರಂಭಿಸಬೇಕು. ಕಂದಾಯ ಇಲಾಖೆಯಲ್ಲಿ ಪೋಡಿ, ದುರಸ್ತಿ ಹಾಗೂ ಪಹಣಿಗಳಲ್ಲಿನ `ಪಿ' ನಮೂದು ದೋಷಗಳನ್ನು ಸರಿಪಡಿಸಿ ಕಂದಾಯ ದಾಖಲೆಗಳನ್ನು ಜನಸ್ನೇಹಿಯಾಗಿಸಬೇಕು. ವೃದ್ಧಾಪ್ಯ, ವಿಧವಾ ಹಾಗೂ ಸಂಧ್ಯಾಸುರಕ್ಷಾದಂತಹ ಸಾಮಾಜಿಕ ಪಿಂಚಣಿಗಳನ್ನು ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ಫಲಾನುಭವಿಗಳಿಗೆ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಬೆAಗಳೂರು ಮೇಲಿನ ಒತ್ತಡ ತಗ್ಗಿಸಲು ಮತ್ತು ಸಮಗ್ರ ನಗರಾಭಿವೃದ್ಧಿ ದೃಷ್ಟಿಯಿಂದ ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟು ವಿಸ್ತಾರವಾಗಿದ್ದು, ಸ್ಥಳದ ಕೊರತೆ ನೀಗಿಸಲು ಗುರುತಿಸಲಾಗಿರುವ ೬೦ ಎಕರೆ ಜಮೀನನ್ನು ಎಪಿಎಂಸಿಗೆ ಹಸ್ತಾಂತರಿಸಲು ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕು. ನಾಲ್ಕು ವರ್ಷಗಳ ಹಿಂದೆ ರಚನೆಯಾದ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯ ೨೦ ವಾರ್ಡ್ಗಳ ಮೂಲಸೌಕರ್ಯಕ್ಕೆ ೫೦ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ನರಸಾಪುರ, ಬೆಳ್ಯೂರು ಮತ್ತು ಚೌಡದೇನಹಳ್ಳಿ ಪಂಚಾಯಿತಿಗಳನ್ನು ಒಗ್ಗೂಡಿಸಿ ಪಟ್ಟಣ ಪಂಚಾಯಿತಿ ರಚಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಹಾಗೂ ೭೦ ಹಳ್ಳಿಗಳನ್ನು ಒಳಗೊಂಡ ವೇಮಗಲ್ ಹೋಬಳಿಯಿಂದ ಕ್ಯಾಲನೂರನ್ನು ಪ್ರತ್ಯೇಕ ಹೋಬಳಿಯನ್ನಾಗಿ ಘೋಷಿಸಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ವೇಮಗಲ್, ನರಸಾಪುರ ಹಾಗೂ ಮಾಲೂರು ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಬೇಕು. ಕೈಗಾರಿಕೆಗಳ ಸಿಎಸ್ಆರ್ ನಿಧಿಯನ್ನು ತಾಲೂಕಿನ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಿವೇಶನ ಪಡೆದು ೫ ವರ್ಷ ಕಳೆದರೂ ಕಾರ್ಯಾರಂಭ ಮಾಡದ ಕೈಗಾರಿಕೆಗಳಿಗೆ ನೋಟಿಸ್ ನೀಡಿ ಜಮೀನು ವಾಪಸ್ ಪಡೆಯಬೇಕು. ಹೊಳಲಿ ಗ್ರಾಮದ ಸರ್ವೆ ನಂ. ೧೦೩ರಲ್ಲಿ ಕೆಎಸ್ಸಿಎಗೆ ಮಂಜೂರಾಗಿರುವ ೧೬ ಎಕರೆ ಗೋಮಾಳ ಜಮೀನಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ೪,೦೦೦ ಕೋಟಿ ವೆಚ್ಚದ ಕೋಲಾರ-ದೇವನಹಳ್ಳಿ ಹಾಗೂ ವೇಮಗಲ್-ಮಾಲೂರು-ಹೊಸೂರು ಚತುಷ್ಪಥ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ತಕ್ಷಣವೇ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗದೊಂದಿಗೆ ಸಮಾಲೋಚನೆ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕೆಂದು ಸುದರ್ಶನ್ ಅವರು ಸಚಿವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande