
ಗದಗ, 04 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಶ್ರದ್ಧೆ, ಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಪೌರಾಣಿಕ ಕಥೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಜನ್ಮಾಷ್ಟಮಿ ಅಂಗವಾಗಿ ಶಾಲೆಯ ಪುಟ್ಟ ಮಕ್ಕಳು ಶ್ರೀಕೃಷ್ಣ, ರಾಧೆ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳ ವೇಷಭೂಷಣ ಧರಿಸಿ ಗಮನ ಸೆಳೆದರು. ಬಣ್ಣಬಣ್ಣದ ಉಡುಪುಗಳು, ಕಿರೀಟ, ಕೊಳಲು ಹಾಗೂ ಸಾಂಪ್ರದಾಯಿಕ ಆಭರಣಗಳಿಂದ ಅಲಂಕೃತಗೊಂಡ ಮಕ್ಕಳು ನೋಡುಗರ ಮನಸೂರೆಗೊಂಡರು. ಪುಟ್ಟ ಕೃಷ್ಣ-ರಾಧೆಯರ ವೇಷದಲ್ಲಿ ಮಕ್ಕಳು ಶಾಲಾ ಆವರಣದಲ್ಲಿ ಓಡಾಡುತ್ತಿದ್ದ ದೃಶ್ಯವು ಹಬ್ಬದ ವಾತಾವರಣವನ್ನು ಮತ್ತಷ್ಟು ಕಳೆಗಟ್ಟಿಸಿತು.
ನಂತರ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಸಾಂಸ್ಕೃತಿಕ ಮೆರವಣಿಗೆ ನಡೆಸಿದರು. ಶ್ರೀಕೃಷ್ಣ ಹಾಗೂ ರಾಧೆಯ ವೇಷಧಾರಿಗಳೊಂದಿಗೆ ವಿವಿಧ ಪೌರಾಣಿಕ ಪಾತ್ರಗಳ ವೇಷ ಧರಿಸಿದ್ದ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಕ್ಕಳ ನೃತ್ಯ, ಸಂಭ್ರಮ ಹಾಗೂ ಉತ್ಸಾಹವನ್ನು ಕಂಡ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. ಪುಟ್ಟ ಮಕ್ಕಳ ಕಲಾ ಪ್ರತಿಭೆಗೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಮೆರವಣಿಗೆ ಗ್ರಾಮದ ಜನರ ಗಮನ ಸೆಳೆಯಿತು.
ಮೆರವಣಿಗೆಯ ಬಳಿಕ ಶಾಲಾ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಅದರಲ್ಲೂ ಸಾಂಪ್ರದಾಯಿಕ ‘ಬೆಣ್ಣೆ ಗಡಿಗೆ ಒಡೆಯುವ ಸ್ಪರ್ಧೆ’ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಶ್ರೀಕೃಷ್ಣನ ಬಾಲಲೀಲೆಯನ್ನು ನೆನಪಿಸುವ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಗಡಿಗೆ ಒಡೆಯುವ ಸಂದರ್ಭದಲ್ಲಿ ಸಹಪಾಠಿಗಳು ಹಾಗೂ ಶಿಕ್ಷಕರು ಮಕ್ಕಳನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದರು. ಮಕ್ಕಳ ಕೇಕೆ, ಚಪ್ಪಾಳೆ ಹಾಗೂ ಸಂಭ್ರಮದಿಂದ ಶಾಲಾ ಆವರಣ ಹಬ್ಬದ ವಾತಾವರಣದಿಂದ ಕಂಗೊಳಿಸಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಮೂಲಕ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಸುವುದರ ಜೊತೆಗೆ, ಅವರಲ್ಲಿರುವ ಸೃಜನಶೀಲತೆ ಹಾಗೂ ಕಲಾ ಪ್ರತಿಭೆಯನ್ನು ಹೊರಹಾಕಲು ಅವಕಾಶ ಕಲ್ಪಿಸಲಾಯಿತು. ವೇಷಭೂಷಣ, ನೃತ್ಯ, ಮೆರವಣಿಗೆ ಮತ್ತು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸಹಕಾರ ಮನೋಭಾವ ಹಾಗೂ ಸಾರ್ವಜನಿಕವಾಗಿ ತಮ್ಮ ಪ್ರತಿಭೆ ಪ್ರದರ್ಶಿಸುವ ಧೈರ್ಯವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಸಿ. ಎನ್. ಜೋಗಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಶಿಕ್ಷಕರಾದ ಬಿ. ಟಿ. ಅಡ್ನೂರ್, ಎಂ. ಐ. ಮುಲ್ಲಾ, ಡಿ. ಎನ್. ಗುಡೂರ್, ಎಚ್. ಎಂ. ರತ್ನಾಕರ್ ಹಾಗೂ ಎಸ್. ವಿ. ಪಾಟೀಲ ಅವರು ಮಕ್ಕಳೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮಕ್ಕಳಿಗೆ ವಿವಿಧ ಪೌರಾಣಿಕ ಪಾತ್ರಗಳ ವೇಷಭೂಷಣ ಸಿದ್ಧಪಡಿಸುವುದು, ಮೆರವಣಿಗೆಯಲ್ಲಿ ಶಿಸ್ತು ಕಾಪಾಡುವುದು, ನೃತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವುದು ಸೇರಿದಂತೆ ಶಿಕ್ಷಕ ವೃಂದದವರು ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರು. ಶಿಕ್ಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಜನ್ಮಾಷ್ಟಮಿ ಆಚರಣೆಗೆ ವಿಶೇಷ ಮೆರುಗು ತಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯನ್ನು ವೀಕ್ಷಿಸಿದ ಗ್ರಾಮಸ್ಥರು ಮಕ್ಕಳ ಪ್ರತಿಭೆ ಹಾಗೂ ಉತ್ಸಾಹವನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಇಂತಹ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಆಸಕ್ತಿ ಮೂಡಿಸುವ ಮೂಲಕ ನಮ್ಮ ನಾಡಿನ ಪರಂಪರೆ ಮುಂದಿನ ಪೀಳಿಗೆಗೂ ಪರಿಚಯವಾಗುವಂತಾಗಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಯಶಸ್ವಿಯಾಗಿ ನೆರವೇರಿತು. ಪುಟ್ಟ ಮಕ್ಕಳ ಕೃಷ್ಣ-ರಾಧೆಯರ ವೇಷಭೂಷಣ, ಸಾಂಸ್ಕೃತಿಕ ಮೆರವಣಿಗೆ, ನೃತ್ಯ ಹಾಗೂ ಬೆಣ್ಣೆ ಗಡಿಗೆ ಒಡೆಯುವ ಸ್ಪರ್ಧೆ ಬೆನಹಾಳ ಗ್ರಾಮದ ಜನರ ಗಮನ ಸೆಳೆಯುವ ಮೂಲಕ ಜನ್ಮಾಷ್ಟಮಿ ಆಚರಣೆಯನ್ನು ಸ್ಮರಣೀಯವಾಗಿಸಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP