
ಕೋಲಾರ, 04 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್ : ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಜನಸಾಮಾನ್ಯರ ಕುಂದುಕೊರತೆಗಳಿಗೆ ತ್ವರಿತ ಮುಕ್ತಿ ನೀಡಲು ಕೋಲಾರ ಜಿಲ್ಲಾಡಳಿತ ಸಜ್ಜಾಗಿದೆ. ಶನಿವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ 'ಪ್ರಜಾ ಸೇವಾ ಅಭಿಯಾನ' ಕಾರ್ಯಕ್ರಮ ಆಯೋಜನೆಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಜನಪರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ನಡೆಯುವ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂತಿಮ ಹಂತದ ಪೂರ್ವ ಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಮಾತನಾಡಿದರು.
ಈ ಬಾರಿಯ ಪ್ರಜಾ ಸೇವಾ ಅಭಿಯಾನದ ಅತಿ ದೊಡ್ಡ ವಿಶೇಷತೆ ಎಂದರೆ, ಅರ್ಜಿಗಳನ್ನು ಕೇವಲ ಸ್ವೀಕರಿಸಿ ಸ್ವೀಕೃತಿ ನೀಡುವ ಬದಲು ಸ್ಥಳದಲ್ಲೇ ಪರಿಹಾರ ನೀಡಲಿದ್ದಾರೆ. ಬದಲಾಗಿ, ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆಯಂತೆ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲೇ ಪರಿಹಾರದ ಆದೇಶ ಪತ್ರವನ್ನು ವಿತರಿಸುವ ಮಹತ್ವದ ಹೆಜ್ಜೆ ಇಡಲಾಗಿದೆ. ಇದಕ್ಕಾಗಿ ಮೈದಾನದಲ್ಲಿ ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ಹೈಟೆಕ್ ಕೌಂಟರ್ಗಳನ್ನು ತೆರೆಯಲಾಗಿದ್ದು, ಡೇಟಾ ಎಂಟ್ರಿ ಆಪರೇಟರ್, ಕಂಪ್ಯೂಟರ್, ಪ್ರಿಂಟರ್ ಹಾಗೂ ಜೆರಾಕ್ಸ್ ಸೌಲಭ್ಯಗಳೊಂದಿಗೆ ಅಧಿಕಾರಿಗಳ ದಂಡು ತ್ವರಿತ ಸೇವೆಗೆ ಸನ್ನದ್ಧವಾಗಿದೆ.
ಬಹುಕಾಲದಿಂದ ಕಗ್ಗಂಟಾಗಿ ಕಾಡುತ್ತಿರುವ ಜಮೀನು ನಕ್ಷೆ, ಕಾಲುದಾರಿ, ಬಂಡಿದಾರಿ, ಸ್ಮಶಾನ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿ ತೆರವಿನಂತಹ ಜ್ವಲಂತ ಸಮಸ್ಯೆಗಳಿಗೆ ಈ ವೇದಿಕೆಯಲ್ಲಿ ವಿಶೇಷ ಆದ್ಯತೆ ಸಿಗಲಿದೆ. ಜನಸಾಗರ ಹರಿದುಬರುವ ನಿರೀಕ್ಷೆ ಇರುವುದರಿಂದ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿಗೆ ಬೃಹತ್ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ಒದಗಿಸಲು ಆಕರ್ಷಕ ಇಲಾಖಾವಾರು ವಸ್ತುಪ್ರದರ್ಶನ ಮಳಿಗೆಗಳನ್ನು ಸಹ ನಿರ್ಮಿಸಲಾಗಿದೆ.
ಸ್ಥಳದಲ್ಲೇ ಬಗೆಹರಿಸಬಹುದಾದ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಸಿಗಲಿದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಾದ ಪ್ರಕರಣಗಳನ್ನು ಮಾತ್ರ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುತ್ತದೆ. ಇನ್ನುಳಿದಂತೆ, ಅನಿವಾರ್ಯ ಕಾರಣಗಳಿಂದ ಸ್ಥಳದಲ್ಲೇ ಇತ್ಯರ್ಥವಾಗದೆ ಉಳಿಯುವ ಶೇಕಡಾ ೧೦ರಷ್ಟು ಅರ್ಜಿಗಳಿಗೆ ಮುಂದಿನ ದಿನಗಳಲ್ಲಿ ಕಡ್ಡಾಯ ಮುಕ್ತಿ ನೀಡಲು ವ್ಯವಸ್ಥೆ ರೂಪಿಸಲಾಗಿದೆ. ಪ್ರತಿ ಬುಧವಾರ ಬೆಳಿಗ್ಗೆ ತಹಶೀಲ್ದಾರ್, ಮಧ್ಯಾಹ್ನ ಉಪವಿಭಾಗಾಧಿಕಾರಿ ಹಾಗೂ ಸಂಜೆ ಖುದ್ದಾಗಿ ಜಿಲ್ಲಾಧಿಕಾರಿಗಳೇ ಈ ಬಾಕಿ ಅರ್ಜಿಗಳ ಪರಿಶೀಲನೆ ನಡೆಸಲಿದ್ದಾರೆ. ಕೋಲಾರ ಭಾಗದ ಸಾರ್ವಜನಿಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವAತೆ ಜಿಲ್ಲಾಧಿಕಾರಿ ಎಂ ಆರ್. ರವಿಕುಮಾರ್ ಅವರು ಆತ್ಮೀಯವಾಗಿ ಕೋರಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳು, ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್