
ಕೋಲಾರ, 04 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ಕೋಳಿ ಸಾಕಾಣಿಕೆ ಕೃಷಿಯಲ್ಲಿ ರೈತರು ಲಾಭಾಂಶವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಪ್ರತಿ ಕೆ.ಜಿ.ಗೆ ೧೦ ಕನಿಷ್ಠ ಸಾಕಾಣಿಕೆ ದರವನ್ನು ಕಂಪನಿಗಳು ಕಡ್ಡಾಯವಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಗಟೂರು ಶ್ರೀಧರ್ ಮಾತನಾಡಿ, ರಾಜ್ಯದಲ್ಲಿ ಸುಮಾರು ೨೫ ಸಾವಿರ ಕೋಳಿ ಸಾಕಾಣಿಕೆದಾರ ರೈತರು, ಲಕ್ಷಕ್ಕೂ ಅಧಿಕ ಕೃಷಿ ಕೂಲಿಕಾರರು ಹಾಗೂ ಸಾವಿರಾರು ಮಾಂಸದ ಅಂಗಡಿ ಮಾಲೀಕರು ಮತ್ತು ಕಾರ್ಮಿಕರು ಈ ಉದ್ಯಮವನ್ನು ಅವಲಂಬಿಸಿದ್ದಾರೆ. ಆದರೆ ಕೋಳಿ ಸಾಕಾಣಿಕೆ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ರೈತರು ಬಂಡವಾಳ ಕಳೆದುಕೊಂಡು, ಬ್ಯಾಂಕ್ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು
ಜಿಲ್ಲಾ ಅಧ್ಯಕ್ಷ ದಿಂಬ ನಾಗರಾಜಗೌಡ ಮಾತನಾಡಿ ಕಂಪನಿಗಳ ಶೋಷಣೆಯಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಸಾಕಾಣಿಕೆ ದರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ೨೦೨೧ರಲ್ಲಿ ಸರ್ಕಾರ ಪ್ರತಿ ಕೆ.ಜಿ.ಗೆ ೬.೨೦ ಕನಿಷ್ಠ ಸಾಕಾಣಿಕೆ ದರ ನಿಗದಿಪಡಿಸಿತ್ತು. ಬಳಿಕ ಸಾಕಾಣಿಕೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ದರವನ್ನು ೨೦ಕ್ಕೆ ಏರಿಸುವಂತೆ ಸಂಘಟನೆ ಹಲವು ಹಂತಗಳಲ್ಲಿ ಹೋರಾಟ ನಡೆಸಿತ್ತು. ರೈತರ ಮನವಿಗೆ ಸ್ಪಂದಿಸಿದ ಸರ್ಕಾರದ ಸಭೆಗಳಲ್ಲಿ ಅಂತಿಮವಾಗಿ ಪ್ರತಿ ಕೆ.ಜಿ.ಗೆ ೧೦ ಕನಿಷ್ಠ ಸಾಕಾಣಿಕೆ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ ಅದನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ನುಕ್ಕನಹಳ್ಳಿ ಶ್ರೀರಾಮ್ ಮಾತನಾಡಿ ಸರ್ಕಾರವು ಆದೇಶ ಹೊರಡಿಸಿ ಹಲವು ತಿಂಗಳು ಕಳೆದರೂ ಕಂಪನಿಗಳು ಅದನ್ನು ಜಾರಿಗೊಳಿಸುತ್ತಿಲ್ಲ. ಆಗಸ್ಟ್ ೧೯ರಂದು ಪಶುಸಂಗೋಪನಾ ಸಚಿವರು ಕಂಪನಿಗಳ ಮುಖ್ಯಸ್ಥರ ಸಭೆ ನಡೆಸಿ ೧೦ ದಿನಗಳೊಳಗೆ ಸರ್ಕಾರದ ನಿರ್ಧಾರ ಜಾರಿಗೊಳಿಸುವಂತೆ ಸೂಚಿಸಿದ್ದರು. ಗಡುವು ಮುಗಿದರೂ ದರ ಪಾವತಿಯಾಗಿಲ್ಲ. ೧೦ ಕೇಳುವ ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಆದೇಶ ಜಾರಿ ಮಾಡದ ಕಂಪನಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಸಿರ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರವೇಶಿಸಿ ಸರ್ಕಾರದ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಕೋಳಿ ಸಾಕಾಣಿಕೆದಾರ ರೈತರನ್ನು ರಕ್ಷಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಪ್ರಕಾಶ್ ರೆಡ್ಡಿ, ವೆಂಕಟೇಶ್, ಚಿಕ್ಕಹಸಾಳ ಲೋಕೇಶ್, ಶ್ರೀನಿವಾಸಪುರ ರಾಜಪ್ಪ, ಕೆಜಿಎಫ್ ವೆಂಕಟರಾಮರೆಡ್ಡಿ, ಮುಳಬಾಗಿಲು ಮಂಜುನಾಥರೆಡ್ಡಿ, ಗೀರೀಶ್, ಅನಿಲ್ ಕುಮಾರ್, ಮುನಿರತ್ನಯ್ಯ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್