ಕೆಪಿಎಸ್ಸಿ ಅಕ್ರಮ ನೇಮಕಾತಿ ತನಿಖೆ ತೀವ್ರ: ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಆಪ್ತನ ಮನೆ ಮೇಲೆ ಸಿಐಡಿ ದಾಳಿ
ಬೀದರ್ನಲ್ಲಿ ಕೆಪಿಎಸ್ಸಿ ಅಕ್ರಮ ನೇಮಕಾತಿ ತನಿಖೆ ತೀವ್ರ
KPSC Scam: CID Raids Close Aide Pavan Reddy's House in Bidar


ಬೀದರ್, 04 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕೆಪಿಎಸ್ಸಿ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಆಪ್ತನ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಐಡಿ ತಂಡವು ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿರುವ ಬಸವರಾಜ್ ಕನ್ನಾಳೆಯ ಅತ್ಯಾಪ್ತ ಪವನ್ ರೆಡ್ಡಿ ಮನೆ ಮೇಲೆ ಈ ಕಾರ್ಯಾಚರಣೆ ನಡೆಸಿದೆ. ಐವರ ಸಿಐಡಿ ಅಧಿಕಾರಿಗಳ ತಂಡವು ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಮನೆಯವರಿಂದ ಮಹತ್ವದ ಮಾಹಿತಿ ಕಲೆಹಾಕುವುದರ ಜೊತೆಗೆ ಪ್ರಮುಖ ದಾಖಲೆಗಳ ಸಮೇತ ತೆರಳಿದೆ.

ಸ್ನೇಹದಿಂದ ಅಕ್ರಮ ವ್ಯವಹಾರದವರೆಗೆ:ಪ್ರಮುಖ ಕಿಂಗ್ ಪಿನ್ ಎನ್ನಲಾದ ಬಸವರಾಜ್ ಕನ್ನಾಳೆ ಹಾಗೂ ಪವನ್ ರೆಡ್ಡಿ ನಡುವೆ ದೆಹಲಿಯಲ್ಲಿ ಯುಪಿಎಸ್ಸಿ ತರಬೇತಿ ಪಡೆಯುವ ಸಂದರ್ಭದಲ್ಲಿ ಸ್ನೇಹ ಬೆಳೆದಿತ್ತು. ತದನಂತರ ಕೆಪಿಎಸ್ಸಿ ಪರೀಕ್ಷೆ ಬರೆಯಲು ಬಂದಾಗ ಇವರ ನಂಟು ಮತ್ತಷ್ಟು ಗಟ್ಟಿಯಾಗಿತ್ತು.

ಬಸವರಾಜ್ ಕನ್ನಾಳೆಯೊಂದಿಗೆ ಕೋಟ್ಯಾಂತರ ರೂಪಾಯಿ ಹಣಕಾಸು ವ್ಯವಹಾರ ಹೊಂದಿದ್ದ ಪವನ್ ರೆಡ್ಡಿ, ನೇಮಕಾತಿ ಹಗರಣದ ವ್ಯವಹಾರದಲ್ಲಿಯೂ ಪ್ರಮುಖ ಪಾಲುದಾರನಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಸಿಐಡಿ ತಂಡವು ದಾಳಿ ನಡೆಸಿ ತನಿಖೆಯನ್ನು ಚುರುಕುಗೊಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande