ನೇತ್ರದಾನಕ್ಕೆ ಕೈಜೋಡಿಸಿ : ಜಿಲ್ಲಾ ಆರೋಗ್ಯಾಧಿಕಾರಿ
ಕಂಪ್ಲಿ, 04 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ದೃಷ್ಟಿಹೀನತೆಯ ನಿವಾರಣೆಗೆ ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಹೆಚ್ಚಿನ ಅರಿವು ಮೂಡುವುದು ಅಗತ್ಯವಾಗಿದ್ದು, ಎಲ್ಲರೂ ನೇತ್ರದಾನಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಹೇಳಿದ್ದಾರೆ. ಎಮ್ಮಿಗನೂರಿನ
Join hands for eye donation: District Health Officer


Join hands for eye donation: District Health Officer


Join hands for eye donation: District Health Officer


ಕಂಪ್ಲಿ, 04 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ದೃಷ್ಟಿಹೀನತೆಯ ನಿವಾರಣೆಗೆ ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಹೆಚ್ಚಿನ ಅರಿವು ಮೂಡುವುದು ಅಗತ್ಯವಾಗಿದ್ದು, ಎಲ್ಲರೂ ನೇತ್ರದಾನಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಹೇಳಿದ್ದಾರೆ.

ಎಮ್ಮಿಗನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ವಿಭಾಗ ಬಳ್ಳಾರಿ, ಕಂಪ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಅಭಿಯಾನವನ್ನು ಆಚರಿಸಲಾಗುತ್ತದೆ. ನೇತ್ರಗಳು ಮಾನವನ ಪಂಚೇಂದ್ರಿಯಗಳಲ್ಲಿ ಅತ್ಯಂತ ಅಮೂಲ್ಯವಾದ ಅಂಗ. ಆದರೆ ಕೆಲವರು ಕಾರ್ನಿಯಾ ಸಮಸ್ಯೆಯಿಂದ ದೃಷ್ಟಿ ಕಳೆದುಕೊಂಡಿರುತ್ತಾರೆ. ಅಂತಹವರಿಗೆ ಮರಣೋತ್ತರ ದಾನವಾಗುವ ಕಾರ್ನಿಯಾವನ್ನು ಕಸಿ ಮಾಡುವ ಮೂಲಕ ಮರುದೃಷ್ಟಿ ನೀಡಲು ಸಾಧ್ಯವಿದೆ. ನೇತ್ರದಾನವು ಜೀವಂತ ವ್ಯಕ್ತಿಯಿಂದ ಕಣ್ಣು ಪಡೆಯುವ ಪ್ರಕ್ರಿಯೆಯಲ್ಲ, ಇದು ಸಂಪೂರ್ಣ ಮರಣೋತ್ತರ ದಾನವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ವಯಸ್ಸಾದವರು, ಕನ್ನಡಕ ಧರಿಸುವವರು ಮತ್ತು ದೃಷ್ಟಿ ದೋಷವುಳ್ಳವರು ಕೂಡ ನೇತ್ರದಾನ ಮಾಡಬಹುದು. ನೇತ್ರದಾನಕ್ಕೆ ನಿರ್ದಿಷ್ಟ ವಯಸ್ಸಿನ ಮಿತಿಯಿಲ್ಲ. ಅಲ್ಲದೆ, ನೇತ್ರದಾನ ಮಾಡುವುದರಿಂದ ಮೃತ ವ್ಯಕ್ತಿಯ ಮುಖ ವಿಕರೂಪಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ. ನೇತ್ರದಾನ ಮಾಡಲು ಇಚ್ಛಿಸುವವರು ತಮ್ಮ ನಿರ್ಧಾರವನ್ನು ಮೊದಲೇ ಕುಟುಂಬಸ್ಥರಿಗೆ ತಿಳಿಸಿರಬೇಕು. ವ್ಯಕ್ತಿ ಮರಣ ಹೊಂದಿದ ನಂತರ 6 ರಿಂದ 8 ಗಂಟೆಗಳ ಒಳಗೆ ಸಮೀಪದ ನೇತ್ರ ಬ್ಯಾಂಕ್ ಅಥವಾ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿ ಕಾರ್ನಿಯಾ ಸಂಗ್ರಹಿಸಲು ಸಹಕರಿಸಬೇಕು ಎಂದರು.

ಅಂಗಾಂಗ ಹಾಗೂ ನೇತ್ರದಾನದ ಮಾಹಿತಿಗಾಗಿ ರಾಷ್ಟ್ರೀಯ ಉಚಿತ ಸಹಾಯವಾಣಿ ಸಂಖ್ಯೆ 1800-11-4770 ಗೆ ಸಂಪರ್ಕಿಸಬಹುದು. ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳು ಜಾಥಾ, ಕರಪತ್ರ ವಿತರಣೆ ಮತ್ತು ಉಪನ್ಯಾಸಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಂಪ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್ ಮಾತನಾಡಿ, ಬಾಲ್ಯವಿವಾಹ ನಿಷೇಧ, ಹದಿಹರೆಯದವರ ಆರೋಗ್ಯ ರಕ್ಷಣೆ, ಕ್ಷಯರೋಗ, ಕುಷ್ಠರೋಗ ನಿರ್ಮೂಲನೆ ಹಾಗೂ ಸೋಂಕಿತ ಸೊಳ್ಳೆಗಳಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಭಾರಿ ಆರೋಗ್ಯ ನಿರೀಕ್ಷಣಾಧಿಕಾರಿ ಬಸವನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ವೀರೇಶ್, ಸಹ ಉಪನ್ಯಾಸಕರಾದ ಲಕ್ಷ್ಮಣ್, ಬೋಧಕ ಸಿಬ್ಬಂದಿ, ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande