
ಬಳ್ಳಾರಿ, 04 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸ್ವಂತ ಹಾಗೂ ವಿಭಿನ್ನ ದೃಷ್ಟಿಕೋನಗಳ ಆಲೋಚನೆಗಳು ಕುಂಠಿತವಾಗುತ್ತಿರುವುದು ಒಳ್ಳೆಯದಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಪಿ.ಎಲ್. ಧರ್ಮ ಅವರು ವಿಷಾಧಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟಕೋಶ ಹಾಗೂ ಗ್ರಂಥಾಲಯ, ಮಾಹಿತಿ ವಿಜ್ಞಾನ ವಿಭಾಗದ ಜಂಟಿ ಸಹಭಾಗಿತ್ವದಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿರುವ ಎರಡು ದಿನಗಳ ‘ಸಂಶೋಧನಾ ವಿಧಾನಗಳು ಮತ್ತು ಪ್ರಕಟಣಾ ನೀತಿ ಸಂಹಿತೆಗಳು’ ವಿಷಯದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಶುಕ್ರವಾರ ಅವರು ಮಾತನಾಡಿದರು.
ಸಂಶೋಧನಾ ವಿದ್ಯಾರ್ಥಿಗಳು ತಮ್ಮ ತಮ್ಮ ಮಾರ್ಗದರ್ಶಕರು ನೀಡಿದ ವಿಷಯವನ್ನೆ ಸಂಶೋಧನಾ ಸರಕಾಗಿ ಅಧ್ಯಯನ ಮಾಡಬೇಕಾದ ಪರಿಸ್ಥಿತಿಯಿದೆ.
ವ್ಯಕ್ತಿಯಿಂದ ವ್ಯಕ್ತಿಗೆ ಯೋಚನಾ ಶಕ್ತಿಯು ಭಿನ್ನವಾಗಿರುವಾಗ ಸಂಶೋಧನೆಯಲ್ಲಿ ಬಹುತೇಕ ಎಲ್ಲ ವಿಷಯಗಳ ಸಂಶೋಧನಾ ವಿಧಾನಗಳು ಹೋಲಿಕೆ ಆಗಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. 2013 ರಿಂದ 2023ರವರೆಗೆ ಕರ್ನಾಟಕದಲ್ಲಿ ಒಟ್ಟಾರೆ 27,000 ಪಿಹೆಚ್.ಡಿ ಪದವಿಗಳು ಹೊರಬಂದಿವೆ ಎಂದು ತಿಳಿಸಿದರು.
ಪ್ರತಿ ಸಂಶೋಧಕರು ಭಾಷಾ ಪಾಂಡಿತ್ಯ, ವಿಷಯ ಜ್ಞಾನ ಹಾಗೂ ಆಧುನಿಕ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅನಕ್ಷರತೆ ಹೋಗಲಾಡಿಸಲು ಸಮಾಜಕ್ಕೆ ಕೈಗನ್ನಡಿಯಾಗಬೇಕಾದ ಗುಣಮಟ್ಟದ ಸಂಶೋಧನಾ ಗ್ರಂಥಗಳನ್ನು ಉತ್ಪಾದಿಸಲು ವಿಶ್ವವಿದ್ಯಾಲಯಗಳು ಮುಂದಾಗಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿ ಪ್ರಕಟವಾಗುವ ಪತ್ರಿಕೆಗಳನ್ನು ಯಾವುದಾದರೂ ಒಂದು ಮಾಧ್ಯಮದ ಮೂಲಕ ಸರ್ಕಾರದ ಸಚಿವಾಲಯಗಳಿಗೆ ತಲುಪುವ ವ್ಯವಸ್ಥೆ ಆಗಬೇಕು. ಇದರಿಂದ ನೈಜ ಸಂಶೋಧಕರಿಗೆ ಪ್ರೋತ್ಸಾಹ ಸಿಗುವ ಸಾಧ್ಯತೆಗಳಿವೆ ಎಂದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಎಂ ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಶೋಧನೆಗೆ ಅಗತ್ಯವಿರುವ ಉಪಯುಕ್ತ ಆಧುನಿಕ ಉಪಕರಣಗಳಿಗಾಗಿ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು. ಅಂತೆಯೇ ಪ್ರತಿಯೊಬ್ಬ ಸಂಶೋಧನಾ ವಿದ್ಯಾರ್ಥಿಯು ವರ್ಷಕ್ಕೆ ಕನಿಷ್ಠ ಎರಡು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಬೇಕು. ಮುಂಬರುವ ದಿನಗಳಲ್ಲಿ ವಿವಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಒದಗಿಸುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ ವಿ ಲೋಕೇಶ್, ಐಕ್ಯೂಎಸಿ ಘಟಕದ ನಿರ್ದೇಶಕರಾದ ಪ್ರೊ. ತಿಪ್ಪೇರುದ್ರಪ್ಪ ಜೆ, ಸಮಾಜ ವಿಜ್ಞಾನ ನಿಕಾಯದ ಡೀನರು ಮತ್ತು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ಓ ಮಾರಣ್ಣ ವೇದಿಕೆಯಲ್ಲಿದ್ದರು.
ಐಕ್ಯೂಎಸಿ ಘಟಕದ ಉಪ ನಿರ್ದೇಶಕರಾದ ಡಾ ಅರ್ಚನಾ ಸ್ವಾಗತಿಸಿದರು. ಡಾ ಅರುಣ್ ವಂದಿಸಿದರು. ಡಾ ಸ್ನೇಹಾ ಸುಮಾ ಹೆಗಡೆ ನಿರೂಪಿಸಿದರು.
ಎರಡು ದಿನಗಳ ಕಾರ್ಯಾಗಾರದಲ್ಲಿ ವಿವಿಯ 100ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್