
ವಿಜಯಪುರ, 04 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇಂಡಿ ಮಂಡಲ ರೈತ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಇಂಡಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ ಅವರು ಭಾಗವಹಿಸಿ ರೈತರ ಸಮಸ್ಯೆಗಳ ಕುರಿತು ಮಾತನಾಡಿದರು. ಮಳೆ ಕೊರತೆ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆ ಕಂಡಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಇಂಡಿ ತಾಲೂಕಿನಲ್ಲಿ ಬರದ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಸಮಗ್ರ ಸಮೀಕ್ಷೆ ನಡೆಸಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ, ಅಗತ್ಯ ನೆರವು ಹಾಗೂ ಸರ್ಕಾರದ ಬರ ಪರಿಹಾರ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈತರು ಕೃಷಿ ಚಟುವಟಿಕೆಗಳಿಗೆ ಅವಲಂಬಿಸಿರುವ ನೀರಿನ ಮೂಲಗಳು ಹಾಗೂ ಬೆಳೆಗಳಿಗೆ ಎದುರಾಗಿರುವ ಸಮಸ್ಯೆಗಳನ್ನು ಸರ್ಕಾರ ಗಮನಿಸಬೇಕು. ರೈತರ ಬದುಕನ್ನು ರಕ್ಷಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಮುಖಂಡರು ಹೇಳಿದರು.
ಧರಣಿ ಸತ್ಯಾಗ್ರಹದ ಬಳಿಕ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕಿನಲ್ಲಿ ಬರ ಪರಿಸ್ಥಿತಿಯ ವಾಸ್ತವಿಕ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು, ರೈತರಿಗೆ ಅಗತ್ಯ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹನುಮಂತರಾಯಗೌಡ ಪಾಟೀಲ, ಪಕ್ಷದ ಮುಖಂಡರಾದ ಕಾಸುಗೌಡ ಬಿರಾದಾರ, ಎಸ್.ಎ. ಪಾಟೀಲ, ಶೀಲವಂತ ಉಮರಾಣಿ, ಅನಿಲ್ ಜಮಾದಾರ, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಕಾಪ್ಸೆ, ಯುವ ನಾಯಕರಾದ ರಾಜಕುಮಾರ ಸಗಾಯಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande