
ಬಳ್ಳಾರಿ, 04 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಿಗಮದ ಬಳ್ಳಾರಿ/ವಿಜಯನಗರ ಜಿಲ್ಲಾ ವ್ಯವಸ್ಥಾಪಕ ಎನ್. ಹೊನ್ನೂರಪ್ಪ ಅವರು ತಿಳಿಸಿದ್ದಾರೆ.
ಆಸಕ್ತರು ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ (ಶೈಕ್ಷಣಿಕ ಸಾಲ ಯೋಜನೆಗೆ ಕೊನೆಯ ದಿನಾಂಕ ಇರುವುದಿಲ್ಲ).
ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ಬ್ಯಾಂಕ್ಗಳ ಸಹಯೋಗದೊಂದಿಗೆ), ಅರಿವು – ಶೈಕ್ಷಣಿಕ ನೇರ ಸಾಲ ಯೋಜನೆ (ಹೊಸದು ಮತ್ತು ನವೀಕರಣ), ಗಂಗಾ ಕಲ್ಯಾಣ ಯೋಜನೆ (ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು), ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವ್ಯಾಸಂಗ ಯೋಜನೆ (ಕುಟುಂಬದ ವಾರ್ಷಿಕ ವರಮಾನ ರೂ. 15 ಲಕ್ಷದ ಮಿತಿಯಲ್ಲಿರಬೇಕು). ಹೊಲಿಗೆ ಯಂತ್ರ / ಜಿಗ್-ಜ್ಯಾಗ್ ಯೋಜನೆ, ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆ (ಈ ಯೋಜನೆಯಡಿ ಅರ್ಜಿಯನ್ನು www.kaushalkar.com ನಲ್ಲಿ ಸಲ್ಲಿಸಬೇಕು).
ಸರ್ಕಾರದ ಆದೇಶದನ್ವಯ ವಿಶ್ವಕರ್ಮ ಸಮುದಾಯ ಅಥವಾ ಅದರ ಉಪಜಾತಿಗಳಿಗೆ ಸೇರಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದ ಮಿತಿಯಲ್ಲಿರಬೇಕು. (ಸ್ವಾವಲಂಬಿ ಸಾರಥಿ ಯೋಜನೆಗೆ 21 ರಿಂದ 45 ವರ್ಷ ಹಾಗೂ ಅರಿವು ಯೋಜನೆಗೆ 18 ರಿಂದ 30 ವರ್ಷ ನಿಗದಿಪಡಿಸಲಾಗಿದೆ).
ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ಗರಿಷ್ಠ ರೂ. 98,000 ಹಾಗೂ ನಗರ ಪ್ರದೇಶದವರಿಗೆ ಗರಿಷ್ಠ ರೂ. 1,20,000 ಮೀರಿರಬಾರದು. (ಅರಿವು ಯೋಜನೆಗೆ ಗರಿಷ್ಠ ವಾರ್ಷಿಕ ಆದಾಯ ರೂ. 3.50 ಲಕ್ಷ).
ಆಯ್ಕೆಯಲ್ಲಿ ಮಹಿಳೆಯರಿಗೆ ಶೇ. 33, ವಿಕಲಚೇತನರಿಗೆ ಶೇ. 5 ಹಾಗೂ ತೃತೀಯ ಲಿಂಗಿಗಳಿಗೆ ಶೇ. 1 ರಷ್ಟು ಮೀಸಲಾತಿ ಇರುತ್ತದೆ.
ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಸಿಗಲಿದ್ದು, ಈ ಹಿಂದೆ ನಿಗಮ ಅಥವಾ ಸರ್ಕಾರದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರಬಾರದು. (ಆದರೆ 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಈ ಬಾರಿ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ).
ಅರ್ಜಿದಾರರ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು, ವಿಳಾಸ, ಜಾತಿ/ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ ವಿವರಗಳು ಪರಸ್ಪರ ತಾಳೆಯಾಗಬೇಕು. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
ಅರ್ಹರು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್-ಜಿ ಜನಸ್ನೇಹಿ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸೇವಾಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ವೆಬ್ಸೈಟ್ :https://kvcdcl.karnataka.gov.in, , ಮಾಹಿತಿಗಾಗಿ ಕೇಂದ್ರ ಕಚೇರಿ ಸಹಾಯವಾಣಿ: 080-22374848 / 7899899039, ಬಳ್ಳಾರಿ ಜಿಲ್ಲಾ ಕಚೇರಿ ಸಂಪರ್ಕ: 08392-267038 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್