
ಮಾಸ್ಕೋ, 30 ಸೆಪ್ಟೆಂಬರ್ (ಹಿ.ಸ.):
ರಷ್ಯಾದ ಅಮೂರ್ ಪ್ರದೇಶದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ Tu-95MS ತಂತ್ರಾತ್ಮಕ ಬಾಂಬರ್ ವಿಮಾನ ಪತನಗೊಂಡಿದ್ದು, ಆರು ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ.
ಮತ್ತೊಬ್ಬ ಸಿಬ್ಬಂದಿಯನ್ನು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆ.29ರಂದು ಉಕ್ರೇಂಕಾ ವಾಯುನೆಲೆಯಿಂದ ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.
ಕಿರಾಸ್ನೊಯರೋವೊ ಗ್ರಾಮದ ಸಮೀಪದ ಜನವಸತಿ ಇಲ್ಲದ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿ ಒಟ್ಟು ಏಳು ಮಂದಿ ಸಿಬ್ಬಂದಿ ಇದ್ದರು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಅಪಘಾತದ ಕಾರಣ ಪತ್ತೆಹಚ್ಚಲು ತನಿಖಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಟೇಕ್ಆಫ್ ಬಳಿಕ ವಿಮಾನದ ನಾಲ್ಕು ಎಂಜಿನ್ಗಳ ಪೈಕಿ ಮೂರು ಎಂಜಿನ್ಗಳು ವಿಫಲವಾಗಿದ್ದವು ಎನ್ನಲಾಗಿದೆ. ಆದರೆ ಮೂರು ಎಂಜಿನ್ಗಳ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
Tu-95MS ರಷ್ಯಾದ ಪ್ರಮುಖ ದೀರ್ಘಶ್ರೇಣಿಯ ತಂತ್ರಾತ್ಮಕ ಬಾಂಬರ್ಗಳಲ್ಲಿ ಒಂದಾಗಿದ್ದು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಲು ಈ ಮಾದರಿಯ ವಿಮಾನಗಳನ್ನು ರಷ್ಯಾ ಬಳಸುತ್ತಿದೆ.
ವಿಮಾನವು ತರಬೇತಿ ಹಾರಾಟದಲ್ಲಿತ್ತು ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತಿರಲಿಲ್ಲ. ಅಪಘಾತದ ನಿಖರ ಕಾರಣವನ್ನು ತನಿಖೆಯ ಬಳಿಕವೇ ತಿಳಿಯಲಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R